Mental Health – ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಲಹೆಗಳು
ಮಾನಸಿಕ ಆರೋಗ್ಯ ವರ್ಧನೆಗೆ ಉತ್ತಮ ನಿದ್ರೆ, ಪೌಷ್ಟಿಕ ಆಹಾರ, ದೈಹಿಕ ವ್ಯಾಯಾಮ, ಮತ್ತು ಒತ್ತಡ ನಿರ್ವಹಣೆ ಅತ್ಯಗತ್ಯ. ಪ್ರತಿದಿನ ಧ್ಯಾನ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು, ಸಾಮಾಜಿಕ ಸಂಪರ್ಕ, ಮತ್ತು ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು ಮನಸ್ಸಿನ ಶಾಂತಿಗೆ ಸಹಕಾರಿ. ಸಕಾರಾತ್ಮಕ ಆಲೋಚನೆ, ‘ಬೇಡ’ ಎನ್ನಲು ಕಲಿಯುವುದು, ಮತ್ತು ಪ್ರಕೃತಿಯೊಂದಿಗೆ ಸಮಯ ಕಳೆಯುವುದು ಮಾನಸಿಕ ಆರೋಗ್ಯ ಸುಧಾರಿಸಲು ಪ್ರಮುಖ ಸೂತ್ರಗಳಾಗಿವೆ.

Read this: Mental Health Healthy Habits For Your Physical And Mental Health
ಮಾನಸಿಕ ಆರೋಗ್ಯ ವರ್ಧನೆಗೆ 15 ಸೂತ್ರಗಳು:
- ಹಿತ-ಮಿತ-ಶಿಸ್ತಿನ ಆಹಾರ ಸೇವನೆ: ಬೆಳಗಿನ ಉಪಹಾರ ಮಧ್ಯಾಹ್ನ ರಾತ್ರಿಯ ಊಟದ ಸಮಯವನ್ನು ನಿಗದಿ ಮಾಡಿಕೊಳ್ಳಿ. ಹಣ್ಣು /ತರಕಾರಿ/ ಬೇಳೆ ಕಾಳುಗಳು/ ರಾಗಿ/ ಗೋಧಿ ಪದಾರ್ಥಗಳನ್ನು ಹೆಚ್ಚು ಸೇವಿಸಿ ಮಾಂಸಾಹಾರಿಗಳು ಮೀನು ಮೊಟ್ಟೆ ಕೋಳಿಮಾಂಸ ಸೇವಿಸಲಿ, ಕೆಂಪು ಮಾಂಸ ಕಡಿಮೆ ತಿನ್ನಲಿ ಜಂಕ್-ಫುಡ್ಸ್ ಬೇಡ. ಹೊರಗಡೆ ಆಹಾರ ಸೇವನೆ ತಗ್ಗಿಸಿ. ಮನೆ ಊಟಕ್ಕೆ ಬಲವಿರಲಿ. ಬಾಯಿರುಚಿಗಿಂತ, ಪೌಷ್ಟಿಕಾಂಶಗಳಿಗೆ ಗಮನಕೊಡಿ.
- ನಿದ್ರೆ: ಬೇಗ ಮಲಗಿ ಬೇಗ ಏಳಿ. ಆರೇಳು ಗಂಟೆಗಳ ಭಂಗವಿಲ್ಲದ ನಿದ್ರೆಮಾಡಿ. ಮಲಗುವ ಸ್ಥಳ ಸ್ವಚ್ಛ ವಾಗಿರಲಿ ಒಳ್ಳೆಯ ಗಾಳ್ಳಿ ಸಂಚಾರ ವಿರಲಿ.
- ಮೈಥುನ: ಒಬ್ಬ ಸಂಗಾತಿಯೊಂದಿಗೆ ಮಾತ್ರ ಲೈಂಗಿಕ ಸಂಬಂಧ ವಿರಲಿ. ವಿವಾಹೇತರ ಸಂಬಂಧ ಬೇಡ. ಅಸಹಜ ಲೈಂಗಿಕ ಕ್ರಿಯೆಯೂ ಬೇಡ. ಲೈಂಗಿಕ ಸಂಯಮ ಸ್ತ್ರೀ ಪುರುಷರಿಬ್ಬರಿಗೂ ಬೇಕು.
- ಷರತಿಲ್ಲದ ಪ್ರೀತಿ-ಸ್ನೇಹ-ವಿಶ್ವಾಸ: ಮನೆಯವರೊಡನೆ, ನೆರೆಹೊರೆ, ಬಂಧು-ಮಿತ್ರರು, ಸಹಪಾಠಿ- ಸಹೋದ್ಯೋಗಿಗಳೊಡನೆ ಪ್ರೀತಿ-ಸ್ನೇಹ ವಿಶ್ವಾಸದಿಂದಿರಿ. ಜೊತೆಯಾಗಿ ಮಾಡಿ ಸಂತೋಷಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಿ. ಹಬ್ಬ-ಹರಿದಿನಗಳನ್ನು ಒಟ್ಟಾಗಿ ಆಚರಿಸಿ. ಇತರರ ಒಳ್ಳೆಯ ನಡೆ-ನುಡಿಗಳನ್ನು ಮೆಚ್ಚಿ ಶ್ಲಾಘಿಸಿ. ಅನಗತ್ಯವಾಗಿ, ಬಹಿರಂಗವಾಗಿ ಟೀಕಿಸಬೇಡಿ. ನಿಮ್ಮ ಅನುಭವ-ಅನಿಸಿಕೆ ಭಾವನೆಗಳನ್ನು ಆತ್ಮೀಯರಲ್ಲಿ ಹಂಚಿಕೊಳ್ಳಿ.
- ಆಸೆ ಆಕಾಂಕ್ಷೆಗಳಿಗೆ ಕಡಿವಾಣ ಹಾಕಿ: ನಿಮ್ಮ ಇತಿ ಮಿತಿಯಲ್ಲಿ ಆಸೆಗಳಿರಲಿ. ಲಭ್ಯವಿರುವುದರಲ್ಲಿ ತೃಪ್ತಿ ಇರಲಿ ಸರಳ ಜೀವನದಿಂದ ನೆಮ್ಮದಿ. ಅತಿಯಾದ ಭೋಗ-ಭಾಗ್ಯ ಆಡಂಬರ-ಪ್ರತಿಷ್ಠೆಗಳು ಸುಖಕ್ಕಿಂತ ದುಃಖವನ್ನು ತರುತ್ತವೆ.
- ಉದ್ಯೋಗ ತೃಪ್ತಿ ಇರಲಿ: ಆಯ್ದುಕೊಂಡ ಉದ್ಯೋಗವನ್ನು ಪ್ರೀತಿಯಿಂದ ಮಾಡಿ. ಉದ್ಯೋಗ ಸ್ಥಳದಲ್ಲಿ ಎಲ್ಲರೊಡನೆ ಹೊಂದಿಕೊಳ್ಳಿ. ಕಿರಿಕಿರಿ ಮಾಡುವವರಿಂದ ದೂರವಿರಿ. ಯಾವುದೇ ಉದ್ಯೋಗ ನಾವು ಸಮಾಜಕ್ಕೆ ಮಾಡುವ ಸೇವೆ ಎಂದು ಭಾವಿಸಿ.
- ವಾಸ್ತವಿಕ ಪ್ರಜ್ಞೆ ಇರಲಿ: ನಿಮ್ಮ ಬಲಾಬಲಗಳ ಅರಿವಿರಲಿ. ಕಲ್ಪನಾ ಲೋಕದಲ್ಲಿಯೇ ವಿಹರಿಸಬೇಡಿ, ಸಂಪನ್ಮೂಲಗಳ ಇತಿಮಿತಿಯ ಅರಿವಿರಲಿ.
- ಸ್ವಾಭಿಮಾನ-ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ: ಯಾವುದೇ ನೆಪ ಕಾರಣವನ್ನು ಒಡ್ಡಿ ಕೀಳರಿಮೆ ಬೇಡ. ಆದಷ್ಟೂ ಸ್ವಾವಲಂಬಿಯಾಗಿರಿ. ಪರಾವಲಂಬನೆ ಸ್ವಾಭಿಮಾನವನ್ನು ತಗ್ಗಿಸುತ್ತದೆ.
- ನಿತ್ಯಜೀವನದಲ್ಲಿ ಶಿಸ್ತು-ಅಚ್ಚುಕಟ್ಟುತನವನ್ನು ರೂಢಿಸಿಕೊಳ್ಳಿ: ಪ್ರತಿಯೊಂದು ಕೆಲಸ, ಚಟುವಟಿಕೆಯನ್ನು ಯೋಜನೆ ಮಾಡಿ. ಪ್ರತಿ ವಸ್ತುವನ್ನು ಆಯಾ ಸ್ಥಳದಲ್ಲಿಡಿ. ಎಲ್ಲೆಂದರೆ ಅಲ್ಲಿ ಎಸೆಯಬೇಡಿ. ಓರಣ ಮತ್ತು ಸ್ವಚ್ಛತೆ ಮನಸ್ಸಿಗೆ ಮುದ ಕೊಡುತ್ತದೆ. ಸಮಯದ ಸದ್ಬಳಕೆಯಾಗುತ್ತದೆ.
- ನಿತ್ಯ ಆರೋಗ್ಯಕರ ಹವ್ಯಾಸ-ಮನರಂಜನೆಗೆ: ಒಂದು ಗಂಟೆ ಮೀಸಲಿಡಿ. ಸಾಹಿತ್ಯ ಲಲಿತ ಕಲೆಗಳು, ಸೃಜನಶೀಲ ಚಟುವಟಿಕೆಗಳು ಮನಸ್ಸಿಗೆ ಸಂತೋಷವನ್ನು ಕೊಡುತ್ತವೆ.
- ನಿತ್ಯ ವ್ಯಾಯಾಮ-ವಾಕಿಂಗ್-ಜಾಗಿಂಗ್-ಹೊರಾಂಗಣ ಕ್ರೀಡೆ, ಸೈಕ್ಲಿಂಗ್, ಈಜು ಇತ್ಯಾದಿ ಶರೀರಕ್ಕೆ ಚಲನೆ ನೀಡುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.
- ನಕಾರಾತ್ಮಕ ಘಟನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ: ಸೋಲು, ಕಷ್ಟ, ನಷ್ಟಗಳು, ಅಗಲಿಕೆ, ಸಾವು, ಅವಮಾನ, ಅಪಘಾತ, ಕೊರತೆ, ಅನಾರೋಗ್ಯಗಳುಂಟಾದಾಗ ಭಯಬೇಡ, ದುಃಖವು ಬೇಡ. ಬಂದು ಹೋಗುವ ಈ ಘಟನೆ ಅನುಭವಗಳಿಂದ ಪಾಠ ಕಲಿಯಿರಿ. ಚಿಂತೆ ಬೇಡ. ಜನಬಲ ಮತ್ತು ಆತ್ಮಬಲವನ್ನು ಹೆಚ್ಚಿಸಿಕೊಳ್ಳಿ.
- ಹಣಕಾಸಿನ ನಿರ್ವಹಣೆ: ಅನಗತ್ಯ ಖರ್ಚುಗಳನ್ನು ಮಾಡಬೇಡಿ. ಆದಾಯ ಖರ್ಚನ್ನು ಬ್ಯಾಲೆನ್ಸ್ ಮಾಡಿ. ಅನಿವಾರ್ಯವಾದಾಗ ಮಾತ್ರಸಾಲ ಮಾಡಿ. ಅದನ್ನು ತೀರಿಸುವ ವಿಧಾನವನ್ನು ಯೋಚಿಸಿ.
- ಅನಿವಾರ್ಯವಾದಾಗ ಮಾತ್ರ ಸ್ಪರ್ಧೆ ಮಾಡಿ: ಅನಗತ್ಯ ಸ್ಪರ್ಧೆ ಬೇಡ, ಎಲ್ಲರಿಗಿಂತ ಮೇಲು, ಎಲ್ಲರಿಗಿಂತ ಮುಂದಿರುವ ಅಗತ್ಯವಿಲ್ಲ. ಎಲ್ಲರ ಪ್ರಗತಿಗಾಗಿ ಶ್ರಮಿಸಿ.
- ದೇವರು-ಧರ್ಮದಲ್ಲಿ ನಂಬಿಕೆ ಇದ್ದರೆ, ನಿಮ್ಮ ಧಾರ್ಮಿಕ ಆಚರಣೆಗಳು ಸರಳವಾಗಿರಲಿ ಸತ್ಯ ಪ್ರಾಮಾಣಿಕತೆ ಸೇವೆಯಲ್ಲಿ ದೇವರನ್ನು ಕಾಣಿ.
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ



