War Again In The Middle East – ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಅಮೆರಿಕಾ ವೈಮಾನಿಕ ದಾಳಿಗೆ ಇರಾನ್ ಆಕ್ರೋಶ ಕದನ ವಿರಾಮ ಒಪ್ಪಂದ ಉಲ್ಲಂಘನೆ ಆರೋಪ!
ಹಾರ್ಮುಜ್ ಜಲಸಂಧಿ ಸಮೀಪ ಅಮೆರಿಕಾ ನಡೆಸಿರುವ ವೈಮಾನಿಕ ದಾಳಿಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದರಿಂದ ಸುಮಾರು ಏಳು ವಾರಗಳಿಂದ ಮುಂದುವರಿದಿದ್ದ ಕದನ ವಿರಾಮ ಒಪ್ಪಂದವೇ ಭಂಗವಾಗುವ ಭೀತಿ ಎದುರಾಗಿದೆ. ಜಾಗತಿಕ ತೈಲ ಸರಬರಾಜು ಹಾಗೂ ಪಶ್ಚಿಮ ಏಷ್ಯಾ ಪ್ರದೇಶದ ಸ್ಥಿರತೆಗೆ ಮಹತ್ವದ್ದಾಗಿರುವ ಈ ಸಂಘರ್ಷ ಮತ್ತೆ ತೀವ್ರಗೊಳ್ಳುವ ಸೂಚನೆ ನೀಡಿದೆ. ಮಂಗಳವಾರ ಮುಂಜಾನೆ ಹಾರ್ಮೊಜ್ಗಾನ್ ಪ್ರಾಂತ್ಯದಲ್ಲಿ ನಡೆದ ದಾಳಿಯನ್ನು ಅಮೆರಿಕ ನಡೆಸಿದೆ ಎಂದು ಆರೋಪಿಸಿರುವ ಇರಾನ್ ವಿದೇಶಾಂಗ ಸಚಿವಾಲಯ, ಇದು ಕದನ ವಿರಾಮದ ಸ್ಪಷ್ಟ ಉಲ್ಲಂಘನೆ ಎಂದು ಕಿಡಿಕಾರಿದೆ.
ಆದರೆ, ಅಮೆರಿಕಾ ಮಾತ್ರ ಈ ಕಾರ್ಯಾಚರಣೆ “ರಕ್ಷಣಾತ್ಮಕ ಕ್ರಮ” ಎಂದು ಸಮರ್ಥಿಸಿಕೊಂಡಿದೆ. ಹಾರ್ಮುಜ್ ಜಲಸಂಧಿಯ ಬಳಿ ಇರಾನ್ ನೌಕಾಪಡೆ ಕ್ಷಿಪಣಿ ವ್ಯವಸ್ಥೆ ಹಾಗೂ ನೌಕಾ ಗಣಿಗಳನ್ನು ಅಳವಡಿಸಲು ಯತ್ನಿಸುತ್ತಿದ್ದ ದೋಣಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ವಾಷಿಂಗ್ಟನ್ ಹೇಳಿದೆ. ಈ ಮಧ್ಯೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಟೆಹ್ರಾನ್ ಹಾಗೂ ವಾಷಿಂಗ್ಟನ್ ನಡುವೆ ನಡೆಯುತ್ತಿರುವ ಮಾತುಕತೆಗಳು ಇನ್ನೂ ಕೆಲವೇ ದಿನಗಳಲ್ಲಿ ಮಹತ್ವದ ಹಂತ ತಲುಪಬಹುದು ಎಂದು ತಿಳಿಸಿದ್ದಾರೆ.
ಪ್ರಾಥಮಿಕ ಒಪ್ಪಂದದ ಮೂಲಕ ಕದನ ವಿರಾಮವನ್ನು ಬಲಪಡಿಸಿ, ಹಾರ್ಮುಜ್ ಜಲಸಂಧಿಯ ಸಮುದ್ರ ಮಾರ್ಗವನ್ನು ಮತ್ತೆ ಸಂಪೂರ್ಣವಾಗಿ ತೆರೆಯುವ ಉದ್ದೇಶ ಹೊಂದಿರುವ ಮಾತುಕತೆಗಳಲ್ಲಿ ಕೆಲವು ಪ್ರಮುಖ ವಿಷಯಗಳ ಕುರಿತ ಒಪ್ಪಂದ ಇನ್ನೂ ಬಾಕಿ ಉಳಿದಿವೆ. ಇರಾನ್ ಸುಮಾರು 24 ಬಿಲಿಯನ್ ಡಾಲರ್ ಮೌಲ್ಯದ ತನ್ನ ಸ್ಥಗಿತಗೊಳಿಸಲಾದ ಆಸ್ತಿಗಳನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತಿದ್ದು, ಇದೇ ಪ್ರಮುಖ ಅಡಚಣೆಯಾಗಿ ಪರಿಣಮಿಸಿದೆ ಎಂದು ವರದಿಗಳು ತಿಳಿಸಿವೆ. ಜೊತೆಗೆ ಲೆಬನಾನ್‌ನಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಸಂಘರ್ಷವನ್ನೂ ಅಂತ್ಯಗೊಳಿಸಬೇಕೆಂದು ಇರಾನ್ ಆಗ್ರಹಿಸಿದೆ.
![]()
ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಕಳೆದ 24 ಗಂಟೆಗಳಲ್ಲಿ 25 ತೈಲ ಟ್ಯಾಂಕರ್‌ಗಳು ಹಾಗೂ ವಾಣಿಜ್ಯ ಹಡಗುಗಳು ತಮ್ಮ ಅನುಮತಿಯೊಂದಿಗೆ ಜಲಸಂಧಿ ದಾಟಿವೆ ಎಂದು ಹೇಳಿದೆ. ಇದೇ ವೇಳೆ ಅಮೆರಿಕಾದ ಒಂದು ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಹಾಗೂ ಮತ್ತೊಂದು ಡ್ರೋನ್ ಮತ್ತು ಯುದ್ಧ ವಿಮಾನವನ್ನು ತಡೆದಿದ್ದೇವೆ ಎಂದು ಇರಾನ್ ಹೇಳಿಕೊಂಡಿದೆ.
ಈ ಬೆಳವಣಿಗೆಗಳಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಿದ್ದು, ಬ್ರೆಂಟ್ ಕಚ್ಚಾ ತೈಲದ ಬೆಲೆ ಸುಮಾರು 3.5 ಶೇಕಡಾ ಏರಿಕೆಯಾಗಿ ಬ್ಯಾರೆಲ್‌ಗೆ 100 ಡಾಲರ್ ಸಮೀಪ ತಲುಪಿದೆ. ಇರಾನ್ ಪರಮೋಚ್ಚ ನಾಯಕ ಮೊಜ್ತಬಾ ಖಮೆನೈ, “ಅಮೆರಿಕಾ ಮತ್ತು ಇಸ್ರೇಲ್ ವಿರುದ್ಧದ ನಿಲುವು ಎಂದಿಗೂ ಬದಲಾಗುವುದಿಲ್ಲ” ಎಂದು ಘೋಷಿಸಿದ್ದು, ಇನ್ನೊಂದೆಡೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಲೆಬನಾನ್‌ನಲ್ಲಿ ಸೈನಿಕ ಕಾರ್ಯಾಚರಣೆಗಳನ್ನು ವಿಸ್ತರಿಸುವುದಾಗಿ ತಿಳಿಸಿದ್ದಾರೆ. ಏತನ್ಮಧ್ಯೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಅಣ್ವಸ್ತ್ರ ಅಭಿವೃದ್ಧಿ ಮಾಡದಂತೆ ತಡೆಯುವುದು ತಮ್ಮ ಪ್ರಮುಖ ಗುರಿ ಎಂದು ಪುನರುಚ್ಚರಿಸಿದ್ದಾರೆ. ಸಂಘರ್ಷದ ನಡುವೆ ಸುಮಾರು 90 ದಿನಗಳಿಂದ ಇಂಟರ್ನೆಟ್ ನಿರ್ಬಂಧ ಎದುರಿಸಿದ್ದ ಇರಾನ್‌ನಲ್ಲಿ ಈಗ ಭಾಗಶಃ ಇಂಟರ್ನೆಟ್ ಸೇವೆ ಮರುಸ್ಥಾಪನೆಯಾಗುತ್ತಿರುವುದಾಗಿ ನೆಟ್‌ಬ್ಲಾಕ್ಸ್ ಸಂಸ್ಥೆ ತಿಳಿಸಿದೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


