HomeLyricsPunya koti Song Lyrics - ಪುಣ್ಯಕೋಟಿ ಗೋವಿನ ಹಾಡು | Folk Song

Punya koti Song Lyrics – ಪುಣ್ಯಕೋಟಿ ಗೋವಿನ ಹಾಡು | Folk Song

Punya koti Song Lyrics – ಪುಣ್ಯಕೋಟಿ ಗೋವಿನ ಹಾಡು 

 

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ಣಾಟ ದೇಶದೊಳಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು

ಉದಯ ಕಾಲದೊಳೆದ್ದು ಗೊಲ್ಲನು
ನದಿಯ ಸ್ನಾನವ ಮಾಡಿಕೊಂಡು
ಮುದದಿ ತಿಲಕವ ಹಣೆಯೊಳಿಟ್ಟು
ಚತುರ ಶಿಖೆಯನು ಹಾಕಿದ

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೇ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದ ಧ್ವನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂತು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

ಹಬ್ಬಿದ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಸಿಡಿದು ರೋಷದಿ ಮೊರೆಯುತಾ ಹುಲಿ
ಘುಡುಘುಡಿಸಿ ಭೋರಿಡುತ ಛಂಗನೆ
ತುಡುಕಲೆರಗಿದ ರಭಸಕಂಜಿ
ಚೆದರಿ ಹೋದವು ಹಸುಗಳು

ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯನಾಡುವೆ ಎಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಇತ್ತು
ಕಂದ ನಿನ್ನನು ನೋಡಿ ಹೋಗುವೆ
ನೆಂದು ಬಂದೆನು ದೊಡ್ಡಿಗೆ

ಆರ ಮೊಲೆಯನು ಕುಡಿಯಲಮ್ಮ?
ಆರ ಸೇರಿ ಬದುಕಲಮ್ಮ?
ಆರ ಬಳಿಯಲಿ ಮಲಗಲಮ್ಮ?
ಆರು ನನಗೆ ಹಿತವರು?

ಅಮ್ಮಗಳಿರಾ ಅಕ್ಕಗಳಿರಾ
ನಮ್ಮ ತಾಯೊಡಹುಟ್ಟುಗಳಿರಾ
ನಿಮ್ಮ ಕಂದನೆಂದು ಕಾಣಿರಿ
ತಬ್ಬಲಿಯನೀ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿ ನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿ ರಕ್ತವಿದೆಕೋ
ಚಂಡ ವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು?
ಎನ್ನುತ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸಿತು ಮೊಲೆಯ ಬೇಗದಿ
ಚೆನ್ನ ಗೊಲ್ಲನ ಕರೆದು ತಾನು
ಮುನ್ನ ತಾನಿಂತೆಂದಿತು

ಎನ್ನ ವಂಶದ ಗೋವ್ಗಳೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರೈ

ಈವನು ಸೌಭಾಗ್ಯ ಸಂಪದ
ಭಾವಜಪಿತ ಕೃಷ್ಣನು

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments