Karnataka Water Alert-ರಾಜ್ಯದ ಕುಡಿಯುವ ನೀರು ಕಲುಷಿತ!
ರಾಜ್ಯದ ಕುಡಿಯುವ ನೀರು ವ್ಯಾಪಕವಾಗಿ ಕಲುಷಿತಗೊಂಡಿದ್ದು, ಜಲಜೀವನ್ ಮಿಷನ್ ವರದಿ ಆತಂಕಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಪರೀಕ್ಷಿಸಿದ ಮಾದರಿಗಳಲ್ಲಿ ರಾಸಾಯನಿಕ ಅಂಶ ಹಾಗೂ ಬ್ಯಾಕ್ಟೀರಿಯಾದಿಂದ ನೀರು ಕಲುಷಿತವಾಗಿರುವುದು ದೃಢಪಟ್ಟಿದೆ. ಈ ಕಲುಷಿತ ನೀರು ಜನರ ಆರೋಗ್ಯಕ್ಕೆ ಗಂಭೀರ ಅಪಾಯ ತಂದೊಡ್ಡಿದ್ದು, ತಕ್ಷಣದ ಕ್ರಮಕ್ಕೆ ಪರಿಸರವಾದಿಗಳು ಒತ್ತಾಯಿಸಿದ್ದಾರೆ.

ಬೆಂಗಳೂರು, ಫೆಬ್ರವರಿ 24: ರಾಜ್ಯದ ತರಕಾರಿಗಳಲ್ಲಿ ಹೇರಳವಾಗಿ ಸೀಸ ಮತ್ತು ಕೀಟನಾಶಕಗಳ ಅಂಶಗಳು ಪತ್ತೆಯಾಗಿರುವ ವಿಚಾರ ಜನರಲ್ಲಿ ಆತಂಕ ಹುಟ್ಟಿಸಿರುವ ನಡುವೆ, ಬೇಸಿಗೆ ಆರಂಭದ ಹೊತ್ತಲ್ಲಿ ನೀರಿನ ಗುಣಮಟ್ಟ ಹದಗೆಟ್ಟ ಶಾಕಿಂಗ್ ರಿಪೋರ್ಟ್ ಹೊರಬಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಗ್ರಹಿಸಲಾಗಿದ್ದ ನೀರಿನ ಮಾದರಿಯನ್ನು ಜಲಜೀವನ್ ಮಿಷನ್ ಯೋಜನೆ ಅಡಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಕುಡಿಯುವ ನೀರಿನಲ್ಲಿ ರಾಸಾಯನಿಕ ಹಾಗೂ ಬ್ಯಾಕ್ಟೀರಿಯಾ ಅಂಶ ಪತ್ತೆಯಾಗಿದೆ. 2023ರಿಂದ 2026ರ ಫೆಬ್ರವರಿವರೆಗೆ ಸಂಗ್ರಹಿಸಿದ್ದ ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ನೀರು ಕಲುಷಿತಗೊಳ್ಳುತ್ತಿರೋದೇಕೆ?
9.34 ಲಕ್ಷ ಮಾದರಿಯಲ್ಲಿ 53 ಸಾವಿರ ಮಾದರಿಗಳಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾಗಿದ್ದರೆ, 7,696 ನೀರಿನ ಸ್ಯಾಂಪಲ್ಗಳಲ್ಲಿ ಬ್ಯಾಕ್ಟೀರಿಯಾ ಅಂಶಗಳು ಕಂಡುಬಂದಿವೆ. ಕೊಳಚೆ ನೀರು ಸೋರಿಕೆ, ಕೈಗಾರಿಕಾ ತ್ಯಾಜ್ಯ ಸೇರ್ಪಡೆ, ಟ್ಯಾಂಕರ್ ಗಳಲ್ಲಿ ಫಂಗಸ್ ಉತ್ಪತ್ತಿ ಮುಂತಾದವುಗಳೇ ನೀರಿನ ಗುಣಮಟ್ಟ ಕೆಡಲು ಪ್ರಮುಖ ಕಾರಣವಾಗುತ್ತಿದ್ದು, ನೈಸರ್ಗಿಕ ಜಲಸಂಪನ್ಮೂಲಗಳ ಸಂರಕ್ಷಣೆಗೆ ಪರಿಸರವಾದಿಗಳಿಂದ ಆಗ್ರಹ ಕೇಳಿಬಂದಿದೆ. ಈ ಬಗ್ಗೆ ಜಲತಜ್ಞ ಟಿ.ವಿ ರಾಮಚಂದ್ರ ಕಳವಳ ವ್ಯಕ್ತಪಡಿಸಿದ್ದು, ನಗರೀಕರಣ ಹಿನ್ನಲೆ ವಾತಾವರಣ ಕಾಂಕ್ರಿಟ್ ನಾಡಾಗಿ ಪರಿವರ್ತನೆ ಆಗುತ್ತಿದೆ. ನೈಸರ್ಗಿಕ ಜಲಸಂಪನ್ಮೂಲಗಳು ಕಲುಷಿತ ಆಗುತ್ತಿರುವುದೇ ಇದಕ್ಕೆ ಕಾರಣ. ಜಲಜೀವನ್ ಮಿಷನ್ ಅಡಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ನೀರು ಪೂರೈಕೆ ಆಗುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


