Actor Umesh Death – ನಟ ಉಮೇಶ್ ನಿಧನ
Read this-Karnataka: DK Shivakumar Calls for Overhaul of Tungabhadra Dam Gates
ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಎಂ.ಎಸ್.ಉಮೇಶ್ (ಮೈಸೂರು ಶ್ರೀಕಂಠಯ್ಯ ಉಮೇಶ್) ನಿಧನರಾಗಿದ್ದಾರೆ. ಅವರು ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ಉಮೇಶ್ ಅವರಿಗೆ ಕ್ಯಾನ್ಸರ್ ಇರುವುದನ್ನು ವೈದ್ಯರು ದೃಢಪಡಿಸಿದ್ದರು. ಸದ್ಯ ಚಿಕಿತ್ಸೆ ಫಲಿಸದೆ ಅವರು ಕಿದ್ವಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 350ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಉಮೇಶ್ ಅವರು ತಮ್ಮ ಹಾಸ್ಯದ ಹಾವಭಾವ ಹಾಗೂ “ಅಪಾರ್ಥ ಮಾಡ್ಕೋಬೇಡಿ” ಡೈಲಾಗ್‌ನಿಂದ ಮನೆಮಾತಾಗಿದ್ದರು.
ಗುರು ಶಿಷ್ಯರು, ಹಾಲು ಜೇನು, ಅಪೂರ್ವ ಸಂಗಮ ಸೇರಿದಂತೆ ಕನ್ನಡದ ಬಹುತೇಕ ಸ್ಟಾರ್ ನಟರೊಂದಿಗೆ ಹಿಟ್ ಸಿನಿಮಾಗಳಲ್ಲಿ ಉಮೇಶ್ ನಟಿಸಿದ್ದಾರೆ. ಇತ್ತೀಚೆಗೆ ಮನೆಯಲ್ಲಿ ಆಯತಪ್ಪಿ ಬಿದ್ದಿದ್ದ ಉಮೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರಿಗೆ ಸ್ಕ್ಯಾನಿಂಗ್ ಮಾಡಿದಾಗ ಉಮೇಶ್ ಅವರಿಗೆ ಕ್ಯಾನ್ಸರ್ ಮೂರನೇ ಸ್ಟೇಜ್‌ನಲ್ಲಿರುವುದು ಪತ್ತೆಯಾಗಿತ್ತು. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬೇಗನೆ ಚೇತರಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ದುರಾದೃಷ್ಟವಶಾತ್ ಉಮೇಶ್ ಅವರು ಇಹಲೋಕ ತ್ಯಜಿಸಿದ್ದಾರೆ.
Read this-High Court Nod for Shanth Kumar – ಹೈಕೋರ್ಟ್ ಅನುಮತಿ
ಉಮೇಶ್ ಅವರ ದೇಹದ ಕೆಲ ಭಾಗಕ್ಕೆ ಕ್ಯಾನ್ಸರ್ ಹರಡಿಕೊಂಡಿದ್ದು, ಈ ಕಾರಣ ಸರ್ಜರಿ ಮಾಡುವುದು ಕೂಡ ಕಷ್ಟ ಎಂದು ವೈದ್ಯರು ಹೇಳಿದ್ದರು. ಆದರೆ ಉಮೇಶ್ ಅವರು ನಗುತ್ತಲೇ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದರು. ವೈದ್ಯರು ನನ್ನನ್ನ ಚೆನ್ನಾಗಿ ನೋಡಿಕೊಳ್ತಿದ್ದಾರೆ. ಅಭಿಮಾನಿಗಳು ಯಾರೂ ಆತಂಕಪಡಬೇಡಿ, ಆದಷ್ಟು ಬೇಗ ಹುಷಾರಾಗಿ ಬರುತ್ತೀನಿ ಎಂದಿದ್ದರು.
ಉಮೇಶ್ ಅವರ ಹಿನ್ನೆಲೆ
ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ಜನಪ್ರಿಯ ಹಾಸ್ಯ ಕಲಾವಿದರಾಗಿ ಉಮೇಶ್ ಗುರುತಿಸಿಕೊಂಡಿದ್ದರು. “ಅಯ್ಯಯ್ಯೋ ಇವ್ರೂ ನನ್ನ ಅಪಾರ್ಥ ಮಾಡ್ಕೊಂಬಿಟ್ರಲ್ಲ” ಎನ್ನುವ ತಮ್ಮ ಜನಪ್ರಿಯ ಡೈಲಾಗ್ ಮೂಲಕ ಉಮೇಶ್ ಮನೆಮಾತಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಎಂ.ಎಸ್. ಉಮೇಶ್ ಎಂದೇ ಜನಪ್ರಿಯರಾಗಿದ್ದ ಇವರು ಆರು ದಶಕಗಳಿಂದಲೂ ಅವರು ಕನ್ನಡ ಸಿನಿಪ್ರೇಕ್ಷಕರನ್ನು ನಕ್ಕು ನಗಿಸಿದ್ದರು. ಸಿನಿಮಾವೊಂದರಲ್ಲಿ ವೃದ್ಧ ವಿಧವೆ ಅಜ್ಜಿಯ ಪಾತ್ರವೂ ಮೆಚ್ಚುಗೆ ಪಡೆದಿತ್ತು. ರಾಜ್‌ಕುಮಾರ್ ಅವರ “ಬೊಂಬೆಯಾಟವಯ್ಯಾ” ಹಾಡಿನಲ್ಲೂ ಉಮೇಶ್ ಕಾಣಿಸಿಕೊಂಡಿದ್ದಾರೆ.
ಉಮೇಶ್ ಮೊದಲಿಗೆ ಮಕ್ಕಳ ರಾಜ್ಯ (1960) ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕಾಗಿ ಆಯ್ಕೆಯಾಗಿದ್ದರು. 1977ರಲ್ಲಿ ತೆರೆಕಂಡ ಕಥಾ ಸಂಗಮದಲ್ಲಿ “ತಿಮ್ಮರಾಯ್” ಪಾತ್ರಕ್ಕೆ ಅವರಿಗೆ ಅತ್ಯುತ್ತಮ ಪೋಷಕ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿತ್ತು. ನಾಗರ ಹೊಳೆ, ಗುರು ಶಿಷ್ಯರು, ಕಾಮನ ಬಿಲ್ಲು, ಅಪೂರ್ವ ಸಂಗಮ, ಶ್ರುತಿ ಸೇರಿದಾಗ, ಮಲಯ ಮಾರುತ, ಹಾಲು ಸಕ್ಕರೆ, ಸಂಕಟದಲ್ಲಿ ವೆಂಕಟ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ಉಮೇಶ್ ಹಾಸ್ಯ ಪ್ರಧಾನ ಪಾತ್ರಗಳನ್ನು ಮಾಡಿದ್ದಾರೆ.
Read this-CM & DCM Harmony – ಸಿಎಂ–ಡಿಸಿಎಂ ಸಮನ್ವಯ : ಕುರ್ಚಿ ಕದನಕ್ಕೆ ತಾತ್ಕಾಲಿಕ ವಿರಾಮ
ಗಣ್ಯರ ಸಂತಾಪ
ಉಮೇಶ್ ಅವರ ನಿಧನಕ್ಕೆ ಚಿತ್ರರಂಗ ಹಾಗೂ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯನಟ ಉಮೇಶ್ ಅವರ ನಿಧನದ ಸುದ್ದಿ ನೋವು ತಂದಿದೆ. ಪ್ರೇಕ್ಷಕರನ್ನು ನಗಿಸುತ್ತಾ, ಕನ್ನಡಾಂಬೆಯ ಸೇವೆಗೈದ ಹಿರಿಯ ಜೀವಕ್ಕೆ ಭಾವಪೂರ್ಣ ವಿದಾಯಗಳು ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ತಮ್ಮ ನವಿರಾದ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತಿದ್ದ ಉಮೇಶ್ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ನಟರು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟರಾದ ಎಂ.ಎಸ್ ಉಮೇಶ್ ಅವರ ನಿಧನದ ಸುದ್ದಿ ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸಂತಾಪ ತಿಳಿಸಿದ್ದಾರೆ. ಉಮೇಶ್ ಅವರ ಕಾಯ ಅಳಿದರೂ ಅವರ ಚಲನಚಿತ್ರಗಳ ಮೂಲಕ ಕನ್ನಡಿಗರ ಜನಮಾನಸದಲ್ಲಿ ಅವರು ಸದಾ ಜೀವಂತ ಎಂದು ಬಿಜೆಪಿ ನಾಯಕ ಆರ್.ಅಶೋಕ್ ಸ್ಮರಿಸಿದ್ದಾರೆ.
Support Us 


