ಇದು ದೈಹಿಕ ನ್ಯೂನತೆ ಮೆಟ್ಟಿನಿಂತ ವ್ಯಕ್ತಿಯ ಕಥೆ – A man who made a living by driving an auto despite a physical disability is a role model for all |KannadaFolks
ಎಲ್ಲಾ ಸರಿಯಿದ್ದು ದುಡಿದು ತಿನ್ನದವರ ನಡುವೆ ದೈಹಿಕ ನ್ಯೂನತೆಯನ್ನು ಬದಿಗಿಟ್ಟು, ಕಷ್ಟ ಪಟ್ಟು ದುಡಿಯುವ ಈ ವ್ಯಕ್ತಿಗಳು ಎಲ್ಲರಿಗೂ ಮಾದರಿ. ಹೌದು, ದೈಹಿಕವಾಗಿ ಎಲ್ಲರಂತೆ ಇರದಿದ್ದರೂ ಆಟೋ ಓಡಿಸಿ ಜೀವನ ನಡೆಸುತ್ತಿರುವ ವ್ಯಕ್ತಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವ್ಯಕ್ತಿಯ ಛಲವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಬದುಕು ಹೊಡೆತಗಳ ಮೇಲೆ ಹೊಡೆತಗಳನ್ನು ನೀಡಬಲ್ಲದು. ಎದ್ದು ನಿಲ್ಲದಂತೆ ಮಾಡಿ ಬಿಡಬಹುದು. ಆದರೆ ಇದೆಲ್ಲದರ ನಡುವೆ ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುವುದಕ್ಕೂ ಧೈರ್ಯ ಬೇಕು. ಇದಕ್ಕೆ ಉದಾಹರಣೆಯಂತಿದ್ದಾರೆ ಈ ವ್ಯಕ್ತಿ. ತನ್ನ ಎರಡು ಕಾಲುಗಳು ಸ್ವಾಧೀನ ಕಳೆದುಕೊಂಡು ದೈಹಿಕ ನ್ಯೂನತೆಯನ್ನು ಎದುರಿಸುತ್ತಿರುವ ಈ ವ್ಯಕ್ತಿಯ ಹೆಸರು ಪ್ರಕಾಶ್ (Prakash). ಆದರೆ ತನ್ನೆಲ್ಲಾ ನ್ಯೂನತೆಯನ್ನು ಬದಿಗಿಟ್ಟು ಜೀವನಕ್ಕಾಗಿ ಅವಲಂಬಿಸಿಕೊಂಡಿದ್ದು ಆಟೋ ಓಡಿಸುವ ಕಾಯಕ. ಕಾಯಕದಲ್ಲಿ ಶ್ರದ್ಧೆ, ನಗುವಿನಿಂದಲೇ ಎಲ್ಲವನ್ನು ಗೆಲ್ಲುವ ಛಲ ಹೊಂದಿರುವ ಈ ಆಟೋ ಚಾಲಕನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಲಾವತಿ ಬಸವರಾಜ್(Kalavati basavaraj) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ದೈಹಿಕ ನ್ಯೂನತೆಯನ್ನು ಮೆಟ್ಟಿ ನಿಂತು ಜೀವನ ನಿರ್ವಹಣೆಗಾಗಿ ಆಟೋ ಓಡಿಸುತ್ತಿರುವ ವ್ಯಕ್ತಿಯನ್ನು ಕಾಣಬಹುದು. ಈ ವ್ಯಕ್ತಿಯ ಆತ್ಮವಿಶ್ವಾಸ, ಮುಖದಲ್ಲಿನ ನಗುವು ಬದುಕಿನಲ್ಲಿ ಗೆದ್ದೇ ಗೆಲ್ಲುವೆ ಎನ್ನುವುದನ್ನು ಸಾರಿ ಹೇಳುವಂತಿದೆ.
ಈ ವಿಡಿಯೋ ಐವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮಗೆ ನಮ್ಮದೊಂದು ಸಲಾಂ ಎಂದಿದ್ದಾರೆ. ಮತ್ತೊಬ್ಬರು, ದೇವರು ಒಳ್ಳೇದು ಮಾಡಲಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ಯುವಪೀಳಿಗೆಗೆ ಮಾದರಿ ಎಂದು ಕಾಮೆಂಟ್ ಮಾಡಿದ್ದಾರೆ.
Support Us 


