Wastewater treatment: BWSSB invites startups – ತ್ಯಾಜ್ಯ ನೀರು ಸಂಸ್ಕರಣೆ
ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ ಕಾರ್ಯನಿರ್ವಹಿಸಲು ಸ್ಟಾರ್ಟ್ಅಪ್ ಸಂಸ್ಥೆಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಆಹ್ವಾನ ನೀಡಿದೆ.
ಬೋಸನ್ ವೈಟ್ವಾಟರ್ ಸ್ಥಾಪಿಸಿದ ಶುದ್ಧೀಕರಣ ಯಂತ್ರೋಪಕರಣಗಳನ್ನು ಉದ್ಘಾಟಿಸಿದ ನಂತರ ಮಾತನಾಡಿದ ಬಿಡಬ್ಲ್ಯೂಎಸ್ಎಸ್’ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ಮಾತನಾಡಿದರು.
ಈ ಯೋಜನೆಯ ಸ್ಟಾರ್ಟ್ಅಪ್ ಸಂಸ್ಥೆಗಳಿಗೆ ಕೇವಲ ನೀರು ಒದಗಿಸುವುದಷ್ಟೇ ಅಲ್ಲದೆ, ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಸುವರ್ಣಾವಕಾಶ ನೀಡಲಿದೆ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ನಗರದ ನೀರಿನ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಲಮಂಡಳಿ ಈ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಯೋಜನೆಯ ಮೊದಲ ಭಾಗವಾಗಿ, ಕಾಡುಬೀಸನಹಳ್ಳಿ ತ್ಯಾಜ್ಯ ನೀರು ಶುದ್ಧೀಕರಣ ಘಟಕದಲ್ಲಿ ಕಾರ್ಯನಿರ್ವಹಿಸಲು ಬೋಸನ್ ವೈಟ್ ವಾಟರ್ ಸಂಸ್ಥೆಗೆ ಅನುಮತಿ ನೀಡಲಾಗಿದೆ. ಈ ಮೂಲಕ ದಿನಕ್ಕೆ 70,000 ಲೀಟರ್ಗಳಷ್ಟು ಗುಣಮಟ್ಟದ ಸಂಸ್ಕರಿಸಿದ ನೀರು ಬಳಕೆಗೆ ಲಭ್ಯವಾಗಲಿದೆ ಎಂದು ತಿಳಿಸಿದರು.
ಯೋಜನೆಯ ಮೂಲಕ ಹೊರ ವರ್ತುಲ ರಸ್ತೆಯ ಉದ್ದಕ್ಕೂ ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ನೀರನ್ನು ಸರಬರಾಜು ಮಾಡಲಾಗುವುದು, ಇದು ನಗರದ ಸಿಹಿನೀರಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಜಲಮಂಡಳಿಯು ಈ ಯೋಜನೆಯಡಿ ಯಾವುದೇ ಬಂಡವಾಳ ಹೂಡಿಕೆ ಮಾಡುವುದಿಲ್ಲ. ಬದಲಿಗೆ, ಬೋಸನ್ ಸಂಸ್ಥೆ ಸ್ವಂತ ವೆಚ್ಚದಲ್ಲಿ ಅಗತ್ಯವಿರುವ ಅತ್ಯಾಧುನಿಕ ಶುದ್ಧೀಕರಣ ಉಪಕರಣಗಳನ್ನು ಅಳವಡಿಸಲಿದೆ. ಜಲಮಂಡಳಿಯು ಕಚ್ಚಾ ವಸ್ತುವಾಗಿ ತ್ಯಾಜ್ಯ ನೀರನ್ನು ಸರಬರಾಜು ಮಾಡಲಿದ್ದು, ಸಂಸ್ಕರಿಸಿದ ನೀರನ್ನು ಮಾರಾಟ ಮಾಡಲು ಮಾರುಕಟ್ಟೆ ಸಂಪರ್ಕ ಒದಗಿಸಲು ಸಹಾಯ ಮಾಡಲಿದೆ ಎಂದರು.
Support Us 


