Parameshwara Clarifies – ದ್ವೇಷ ಭಾಷಣ ಮಸೂದೆ ಬಿಜೆಪಿ ಗುರಿಯಲ್ಲ
Read this-Karnataka Weather ಮಲೆನಾಡಿನಲ್ಲಿ ದಟ್ಟ ಮಂಜು
ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ದ್ವೇಷ ಭಾಷಣ ವಿರೋಧಿ ಮಸೂದೆ ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡುವ ಉದ್ದೇಶ ಇಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, “ದ್ವೇಷ ಭಾಷಣ ಮಸೂದೆ ಬಿಜೆಪಿ ಟಾರ್ಗೆಟ್ ಮಾಡಲು ತರ್ತಿಲ್ಲ. ಅಧಿಕಾರದಲ್ಲಿ ನಾವೇ ಶಾಶ್ವತವಾಗಿ ಇರುತ್ತೇವಾ? ಬಿಜೆಪಿ ಅವರು ಬರಲ್ವಾ? ಯಾರೇ ಬಂದರೂ ಕಾಯ್ದೆ ಅದೇ ಇರುತ್ತದೆ” ಎಂದು ತಿಳಿಸಿದರು.ದ್ವೇಷ ಭಾಷಣ ಸಂಬಂಧ ಮಸೂದೆ ಮಂಡನೆ ಮಾಡುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ಚರ್ಚೆ ನಡೆಯಲಿದೆ. ಸಂಪುಟದಲ್ಲಿ ಬಿಲ್ ಮಂಡನೆಗೆ ಅನುಮತಿ ಪಡೆಯುತ್ತೇವೆ. ಈಗ ಇರುವ ಕಾಯ್ದೆಯನ್ನೇ ಇನ್ನಷ್ಟು ಬಲಪಡಿಸುವ ತಿದ್ದುಪಡಿ ಮಾಡಲಾಗಿದೆ. ಆದರೆ ಬಿಜೆಪಿಯವರನ್ನು ಟಾರ್ಗೆಟ್ ಮಾಡುವ ಸಲುವಾಗಿ ಮಸೂದೆ ಜಾರಿಗೆ ತರಲಾಗುತ್ತಿದೆ ಎಂಬುದು ಸುಳ್ಳು ಆರೋಪ ಎಂದರು.
ಇದೇ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ಕೊಟ್ಟ ವಿಚಾರವಾಗಿ ಮಾತನಾಡಿ, “ಊಟ ಮಾಡೋದು, ಜತೆಯಲ್ಲಿ ಓಡಾಡೋದು, ಒಟ್ಟಿಗೇ ಪ್ರಯಾಣ ಮಾಡಿದರೆ ಬಿಜೆಪಿಯವರಿಗೇನು ಆತಂಕ?” ಎಂದು ಪ್ರಶ್ನಿಸಿದರು. ಹಾಗೂ ಬಿಜೆಪಿಯವರು ಇದನ್ನೇ ದೊಡ್ಡದಾಗಿ ಮಾಡಿದ್ರೆ ನಾವು ಇನ್ನಷ್ಟು ಜಾಸ್ತಿ ಮಾಡ್ತೀವಿ ಎಂದು ತಿರುಗೇಟು ನೀಡಿದರು.
ವೇಣುಗೋಪಾಲ್ ಜೊತೆ ರಾಜಕೀಯ ಚರ್ಚೆ ಇಲ್ಲ
ಬುಧವಾರ ಮಂಗಳೂರಿನಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲರನ್ನು ಭೇಟಿ ಮಾಡಿದ್ದೆ. ಅವರು ಪಕ್ಕದಲ್ಲೇ ಕೂತಿದ್ರು. ಆದ್ರೆ ಯಾವುದೇ ರಾಜಕೀಯ ಚರ್ಚೆ ಮಾಡಲಿಲ್ಲ ಎಂದು ತಿಳಿಸಿದರು.
ಸಿಎಂ ಸಭೆ ವಿಚಾರ ಗೊತ್ತಿಲ್ಲ
ಸಂಪುಟ ಸಭೆಯ ಬಳಿಕ ಸಚಿವರ ಜತೆಗೆ ಸಿಎಂ ಸಭೆ ವಿಚಾರ ನನಗೆ ಗೊತ್ತಿಲ್ಲ. ಸಭೆಗೆ ಇನ್ನೂ ಆಹ್ವಾನ ಬಂದಿಲ್ಲ. ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಸಿಎಂ ಸಿದ್ದರಾಮಯ್ಯ ತಿಳಿಸಬಹುದು ಎಂದರು.
ಮಂಗಳೂರಿನಲ್ಲಿ ಸಿಎಂ-ಡಿಸಿಎಂ ಪರ ಘೋಷಣೆ ಕೂಗಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿ, “ಒಬ್ಬೊಬ್ಬ ನಾಯಕರಿಗೆ ಒಂದಷ್ಟು ಅಭಿಮಾನಿಗಳು ಇರ್ತಾರೆ. ಅವರು ಜೈಕಾರ ಹಾಕುತ್ತಿರುತ್ತಾರೆ, ಅದು ತಪ್ಪು ಅಂತ ಹೇಳಕ್ಕಾಗಲ್ಲ. ಸಮಸ್ಯೆಗಳು ಬಗೆಹರಿದರೆ ಇವೆಲ್ಲ ನಿಂತು ಹೋಗುತ್ತವೆ” ಎಂದರು.
Support Us 


