Life Story of Shamanur Shivashankarappa – ಶಾಮನೂರು ಶಿವಶಂಕರಪ್ಪ| Kannada Folks
ದೇಶದ ಹಿರಿಯ ಶಾಸಕ, ಸೋಲಿಲ್ಲದ ಸರದಾರ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಶಾಮನೂರು ಶಿವಶಂಕರಪ್ಪ ಇಹಲೋಕ ತ್ಯಜಿಸಿದ್ದಾರೆ. ಬರೋಬ್ಬರಿ 95 ವರ್ಷಗಳ ಸ್ಫೂರ್ತಿಯುತ ಜೀವನ ನಡೆಸಿದ್ದ ಶಿವಶಂಕರಪ್ಪ, 10ನೇ ತರಗತಿವರೆಗೆ ಓದಿದ್ದರೂ ಸಾವಿರಾರು ಡಾಕ್ಟರ್, ಇಂಜಿನಿಯರ್‌ಗಳನ್ನು ಬಾಪೂಜಿ ಸಂಸ್ಥೆಯ ಮೂಲಕ ಸೃಷ್ಟಿಸಿದ್ದರು.
Read this – Menstrual Leave: New Karnataka Govt Order ಋತುಚಕ್ರ ರಜೆ: ಕರ್ನಾಟಕ ಸರ್ಕಾರದ ಹೊಸ ಆದೇಶ
ಶಾಮನೂರು ಅವರ ನಿಧನದಿಂದ ಮಧ್ಯ ಕರ್ನಾಟಕದ ಪ್ರಬಲ ಕೊಂಡಿಯೊಂದು ಕಳಚಿದಂತಾಗಿದೆ. ದಾವಣಗೆರೆ ಜಿಲ್ಲೆ ಅಕ್ಷರಶಃ ಅನಾಥವಾಗಿದೆ. ಹತ್ತನೇ ತರಗತಿಯವರೆಗೆ ಓದಿದ್ದ ಹುಡುಗನೊಬ್ಬ, ದಕ್ಷಿಣ ಭಾರತವೇ ತಿರುಗಿ ನೋಡುವಂತಹ ಶಿಕ್ಷಣ ಮತ್ತು ಉದ್ಯಮ ಸಾಮ್ರಾಜ್ಯ ಕಟ್ಟಿ ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ವಯಸ್ಸು ಕೇವಲ ಸಂಖ್ಯೆ ಅಷ್ಟೇ ಎಂದು ತಮ್ಮ 95 ನೇ ವಯಸ್ಸಿನಲ್ಲೂ ಸಾಬೀತುಪಡಿಸಿದ ಚೈತನ್ಯದ ಚಿಲುಮೆ ಶಾಮನೂರು ಶಿವಶಂಕರಪ್ಪ. ಅವರ ನಿಧನದಿಂದ ದಾವಣಗೆರೆ ಮಾತ್ರವಲ್ಲ, ಕರ್ನಾಟಕ ರಾಜಕೀಯಕ್ಕೆ ತುಂಬಲಾರದ ನಷ್ಟವಾಗಿದೆ.
ಹಳ್ಳಿಯ ಹುಡುಗ ಟು ಉದ್ಯಮದ ದೊರೆ!
ಶಾಮನೂರು ಶಿವಶಂಕರಪ್ಪ ಅವರ ಆರಂಭಿಕ ಜೀವನ ತುಂಬಾನೇ ಸಿಂಪಲ್ ಆಗಿತ್ತು. ದಾವಣಗೆರೆಯ ಪ್ರತಿಷ್ಠಿತ ಶಾಮನೂರು ಕುಟುಂಬದ ಶಾಮನೂರು ಕಲ್ಲಪ್ಪ ಮತ್ತು ಸಾವಿತ್ರಮ್ಮ ದಂಪತಿಯ ದ್ವಿತೀಯ ಪುತ್ರನಾಗಿ ಜನಿಸಿದ ಇವರು, ಹುಟ್ಟೂರು ದಾವಣಗೆರೆಯಲ್ಲೇ ಶಾಲಾ ಶಿಕ್ಷಣ ಮುಗಿಸಿದರು. 10ನೇ ತರಗತಿಯವರೆಗೆ ಮಾತ್ರ ಓದಿದ್ದ ಇವರು, ಮುಂದೆ ಬ್ಯುಸಿನೆಸ್ ಕ್ಷೇತ್ರಕ್ಕೆ ಇಳಿದು ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದರು. ಒಂದು ಕಾಲದಲ್ಲಿ ದಾವಣಗೆರೆ ಕಾಟನ್ ಮಿಲ್‌ಗಳಿಗೆ ಫೇಮಸ್ ಆಗಿತ್ತು, ಇದನ್ನು ಕರ್ನಾಟಕದ ಮ್ಯಾಂಚೆಸ್ಟರ್ ಎನ್ನಲಾಗುತ್ತಿತ್ತು. ಆದರೆ, ಯಾವಾಗ ಹತ್ತಿ ಗಿರಣಿಗಳು ಮುಚ್ಚಲ್ಪಟ್ಟವೋ, ಆಗ ದಾವಣಗೆರೆಯ ಆರ್ಥಿಕತೆ ಕುಸಿಯದಂತೆ ತಡೆದವರು ಇದೇ ಶಾಮನೂರು
Read this-Highlights news of the day-ದಿನದ ಪ್ರಮುಖ ಸುದ್ದಿಗಳು
ಸಾವಿರಾರು ಜನರಿಗೆ ಉದ್ಯೋಗ
ಭದ್ರಾ ಕಾಲುವೆ ಯೋಜನೆಯ ಲಾಭ ಪಡೆದು, ಕೃಷಿ ಆಧಾರಿತ ಉದ್ಯಮಗಳಿಗೆ ಕೈಹಾಕಿದರು. ಕುಕ್ಕುವಾಡದಲ್ಲಿ ನಷ್ಟದಲ್ಲಿದ್ದ ದಾವಣಗೆರೆ ಶುಗರ್ ಮಿಲ್ಸ್ ಅನ್ನು ಟೇಕ್ ಓವರ್ ಮಾಡಿ, ಅದನ್ನು ಲಾಭದಾಯಕವಾಗಿ ಬದಲಾಯಿಸಿದರು. ನಂತರ 1995ರಲ್ಲಿ ಶಾಮನೂರು ಶುಗರ್ಸ್ ಲಿಮಿಟೆಡ್ ಸ್ಥಾಪಿಸಿ, 1999ರಲ್ಲಿ ಉತ್ಪಾದನೆ ಆರಂಭಿಸಿದರು. ಕೇವಲ ಸಕ್ಕರೆ ಮಾತ್ರವಲ್ಲ, ಡಿಸ್ಟಿಲರಿ ಮತ್ತು ವಿದ್ಯುತ್ ಉತ್ಪಾದನೆಯನ್ನೂ ಆರಂಭಿಸಿ ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಿದರು.
ಬಾಪೂಜಿಯ ಹೆಸರಲ್ಲಿ ಅಕ್ಷರ ಕ್ರಾಂತಿ! ಬೆಣ್ಣೆ ನಗರಿ ದಾವಣಗೆರೆ ಈಗ ವಿದ್ಯಾನಗರಿ!
ಶಾಮನೂರು ಅವರನ್ನು ಜನ ಪ್ರೀತಿಯಿಂದ ನೆನೆಯುವುದು ಅವರು ಕಟ್ಟಿದ ಶಿಕ್ಷಣ ಸಂಸ್ಥೆಗಳಿಗಾಗಿ. 1958ರಲ್ಲಿ ಧರ್ಮರತ್ನಾಕರ ರಾಜನಹಳ್ಳಿ ಮದ್ದೂರಾಯಪ್ಪ ಸ್ಥಾಪಿಸಿದ್ದ ಬಾಪೂಜಿ ಎಜುಕೇಷನಲ್ ಅಸೋಸಿಯೇಷನ್ ನೇತೃತ್ವವನ್ನು 1972ರಲ್ಲಿ ಶಾಮನೂರು ಶಿವಶಂಕರಪ್ಪ ವಹಿಸಿಕೊಂಡರು. ಅಂದು ಕೇವಲ 5 ಕಾಲೇಜುಗಳಿದ್ದ ಈ ಸಂಸ್ಥೆಯನ್ನು, ಇಂದು 50ಕ್ಕೂ ಹೆಚ್ಚು ಸಂಸ್ಥೆಗಳ ಹೆಮ್ಮರವಾಗಿ ಬೆಳೆಸಿದ್ದಾರೆ. ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಜೆಜೆಎಂ ಮೆಡಿಕಲ್ ಕಾಲೇಜು, ಡೆಂಟಲ್ ಕಾಲೇಜು, ಫಾರ್ಮಸಿ, ನರ್ಸಿಂಗ್ ಹೀಗೆ ಹತ್ತು ಹಲವು ವೃತ್ತಿಪರ ಕೋರ್ಸ್‌ಗಳನ್ನು ದಾವಣಗೆರೆಗೆ ತಂದರು.
Read this – 45 OTT release ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರ ಮುಂಬರುವ ಕನ್ನಡ ಚಲನಚಿತ್ರ| Kannada Folks
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ, ಅದರಲ್ಲೂ ಹೆಣ್ಣುಮಕ್ಕಳಿಗೆ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಎವಿಕೆ ಮಹಿಳಾ ಕಾಲೇಜನ್ನು ಬಲಪಡಿಸಿದರು, ಅಲ್ಲಿ ಈಗ ವರ್ಷಕ್ಕೆ 3,400ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪದವಿ ಪಡೆಯುತ್ತಿದ್ದಾರೆ. ಕುನಿಬೆಳಕೆರೆ, ಹರಿಹರ, ತೊಲಹುಣಸೆ ಮತ್ತು ಚನ್ನಗಿರಿಯಂತಹ ಗ್ರಾಮೀಣ ಭಾಗಗಳಲ್ಲೂ ಕಾಲೇಜುಗಳನ್ನು ತೆರೆದು ಬಡವರ ಮನೆಬಾಗಿಲಿಗೆ ಶಿಕ್ಷಣ ತಲುಪಿಸಿದ್ದು ಇದೇ ಶಾಮನೂರು ಶಿವಶಂಕರಪ್ಪ.
ರಾಜಕೀಯದಲ್ಲಿ ಸೋಲಿಲ್ಲದ ಸರದಾರ!
ಉದ್ಯಮದಷ್ಟೇ ಯಶಸ್ಸನ್ನು ಶಾಮನೂರು ರಾಜಕೀಯದಲ್ಲೂ ಕಂಡರು. 1969ರಲ್ಲಿ ದಾವಣಗೆರೆ ಪುರಸಭೆ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ ಇವರು, 1971ರಲ್ಲಿ ಅದರ ಅಧ್ಯಕ್ಷರಾದರು. 1994ರಲ್ಲಿ ಮೊದಲ ಬಾರಿಗೆ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. ಅಲ್ಲಿಂದ ಇಲ್ಲಿಯವರೆಗೆ ಅವರು ಹಿಂತಿರುಗಿ ನೋಡಲೇ ಇಲ್ಲ. ದಾವಣಗೆರೆ ದಕ್ಷಿಣ ಕ್ಷೇತ್ರ ಅವರ ಭದ್ರಕೋಟೆಯಾಗಿತ್ತು. ದಕ್ಷಣಿ ಕ್ಷೇತ್ರ ಆರಂಭವಾದಾಗಿನಿಂದಲೂ ಅಂದರೆ, 2008, 2013, 2018 ಮತ್ತು 2023ರಲ್ಲಿ ಸತತವಾಗಿ ಗೆಲುವು ಸಾಧಿಸಿದರು.
2013ರಲ್ಲಿ ಬರೋಬ್ಬರಿ 40,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದರೆ, 2023ರ ಕಳೆದ ಚುನಾವಣೆಯಲ್ಲಿ ತಮ್ಮ 92ನೇ ಇಳಿ ವಯಸ್ಸಿನಲ್ಲೂ ಬಿಜೆಪಿಯ ಬಿಜಿ ಅಜಯ್ ಕುಮಾರ್ ವಿರುದ್ಧ 27,888 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದರು. ಒಮ್ಮೆ ದಾವಣಗೆರೆಯಿಂದ ಲೋಕಸಭೆಗೂ ಆಯ್ಕೆಯಾಗಿದ್ದರು. ಮೂರು ದಶಕಗಳ ಕಾಲ ಕೆಪಿಸಿಸಿ ಖಜಾಂಚಿಯಾಗಿದ್ದ ಇವರು, ಪಕ್ಷದ ಕಷ್ಟಕಾಲದಲ್ಲೂ ಆರ್ಥಿಕ ಬೆನ್ನೆಲುಬಾಗಿ ನಿಂತಿದ್ದರು. ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದ ಇವರು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿಯೂ ಸಮಾಜವನ್ನು ಸಂಘಟಿಸಿದ್ದರು.
Read this – Andhra Pradesh 100 ವರ್ಷಗಳಷ್ಟು ಹಳೆಯ ಬೇವಿನ ಮರ ಕಡಿಯದೇ ಮನೆ ನಿರ್ಮಿಸಿದ ಕುಟುಂಬ
ಸಮಾಜಕ್ಕಾಗಿ ಕೋಟಿ ಮೀಸಲು!
ಶಾಮನೂರು ಶಿವಶಂಕರಪ್ಪ ಕೇವಲ ಹಣ ಗಳಿಸಲಿಲ್ಲ, ಅದನ್ನು ಸಮಾಜಕ್ಕೆ ಮರಳಿಸುವುದರಲ್ಲೂ ಎತ್ತಿದ ಕೈ. ಡಾ. ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ ಮೂಲಕ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲು 5 ಕೋಟಿ ರೂಪಾಯಿ ಠೇವಣಿ ಇಟ್ಟಿದ್ದರು. ಇದರಲ್ಲಿ ವಿಶೇಷವೆಂದರೆ, ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ 1 ಕೋಟಿ ರೂಪಾಯಿ ಮೀಸಲಿಟ್ಟಿದ್ದರು. ಜಾತಿ-ಮತ ನೋಡದೆ ಬಡ ಪ್ರತಿಭಾವಂತರಿಗೆ ನೆರವು ನೀಡುತ್ತಿದ್ದರು. ಕೋವಿಡ್ ಎರಡನೇ ಅಲೆಯ ಸಂಕಷ್ಟದ ಸಮಯದಲ್ಲಿ, ಬಡವರಿಗೆ ಉಚಿತವಾಗಿ ನೀಡಲು ಬರೋಬ್ಬರಿ 6 ಕೋಟಿ ರೂಪಾಯಿ ಮೌಲ್ಯದ 60,000 ಲಸಿಕೆಗಳನ್ನು ಸ್ವಂತ ಖರ್ಚಿನಲ್ಲಿ ಖರೀದಿಸಿ ನೀಡಿದ್ದರು. ದಾವಣಗೆರೆಯಲ್ಲಿ ಬಡವರಿಗಾಗಿ ಶಿವ ಪಾರ್ವತಿ ಕಲ್ಯಾಣ ಮಂಟಪ ನಿರ್ಮಿಸಿದರು. ನಗರದಲ್ಲಿ ಕಾಂಕ್ರೀಟ್ ರಸ್ತೆಗಳು, 50ಕ್ಕೂ ಹೆಚ್ಚು ಪಾರ್ಕ್‌ಗಳ ಅಭಿವೃದ್ಧಿ, 24/7 ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದ್ದರು. ದಾವಣಗೆರೆಗೆ ಸ್ಮಾರ್ಟ್ ಸಿಟಿ ಪಟ್ಟ ಸಿಗುವಲ್ಲಿ ಇವರ ಶ್ರಮ ಅಪಾರವಾಗಿತ್ತು. ದೇವಸ್ಥಾನಗಳಿಗೆ ಅನ್ನದಾಸೋಹದ ಹಾಲ್‌ಗಳನ್ನು ನಿರ್ಮಿಸಿಕೊಡುವುದರಲ್ಲೂ ಇವರು ಮುಂಚೂಣಿಯಲ್ಲಿದ್ದರು.
ದಾವಣಗೆರೆ ಜನರ ಪ್ರೀತಿಯ ಅಪ್ಪಾಜಿ ಶಾಮನೂರು!
ಶಾಮನೂರು ಶಿವಶಂಕರಪ್ಪ ಅವರ ಲೈಫ್‌ಸ್ಟೈಲ್ ಕೂಡ ಅಷ್ಟೇ ರೋಚಕವಾಗಿತ್ತು. ದಾವಣಗೆರೆ ಕ್ರಿಕೆಟ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿದ್ದ ಇವರು ಕ್ರೀಡಾ ಪ್ರೇಮಿ. ಶಾಮನೂರು ದಾವಣಗೆರೆ ಡೈಮಂಡ್ಸ್ ಕ್ರಿಕೆಟ್ ತಂಡದ ಒಡೆಯ. ಓಡಾಡಲು ಹೆಲಿಕಾಪ್ಟರ್ ಬಳಸುತ್ತಿದ್ದ ಇವರು, ಚುನಾವಣಾ ಪ್ರಚಾರದ ಸಮಯದಲ್ಲಿ ಮಾತ್ರ ಎಲೆಕ್ಟ್ರಿಕ್ ಬಗ್ಗಿ ಏರುತ್ತಿದ್ದರು. ಗಾಲ್ಫ್ ಕಾರಿನಂತಿರುವ ಬಗ್ಗಿಯಲ್ಲಿ ಕುಳಿತು ಗಲ್ಲಿ ಗಲ್ಲಿ ಸುತ್ತುತ್ತಾ, ಜನರಿಗೆ ಕೈಮುಗಿಯುತ್ತಾ ಮತ ಕೇಳುವ ಇವರ ಪರಿ ವಿಶಿಷ್ಟವಾಗಿತ್ತು. ತಮ್ಮ ಹಾಸ್ಯಪ್ರಜ್ಞೆ ಮತ್ತು ನೇರ ಮಾತುಗಳಿಂದಲೇ ಜನರನ್ನು ಸೆಳೆಯುತ್ತಿದ್ದರು. ಎಷ್ಟೇ ಶ್ರೀಮಂತರಾಗಿದ್ದರೂ, ದಾವಣಗೆರೆಯ ಜನರಿಗೆ ಇವರು ಪ್ರೀತಿಯ ಅಪ್ಪಾಜಿ ಆಗಿದ್ದರು. ಅವರ ಮಗ ಎಸ್‌ಎಸ್ ಮಲ್ಲಿಕಾರ್ಜುನ್ ಪ್ರಸ್ತುತ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದು, ಸೊಸೆ ಪ್ರಭಾ ಮಲ್ಲಿಕಾರ್ಜುನ್ ಕೂಡ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕುಟುಂಬ ರಾಜಕಾರಣದರಾಚೆಗೆ ಶಾಮನೂರು ಶಿವಶಂಕರಪ್ಪ ಜನಪ್ರೀತಿಯನ್ನು ಗಳಿಸಿದ್ದರು.
Support Us 


