HomeNewsLife story of Basanagouda Ramanagouda Patil Yatnal - ಬಸನಗೌಡ ರಾಮನಗೌಡ ಪಾಟೀಲ ಯತ್ನಾಳ|...

Life story of Basanagouda Ramanagouda Patil Yatnal – ಬಸನಗೌಡ ರಾಮನಗೌಡ ಪಾಟೀಲ ಯತ್ನಾಳ| Kannada Folks

Basanagouda Patil Yatnal – The Outspoken Leader

Life story of Basanagouda Ramanagouda Patil Yatnal – ಬಸನಗೌಡ ರಾಮನಗೌಡ ಪಾಟೀಲ ಯತ್ನಾಳ

ವಿಜಾಪುರದಿಂದ 15-20 ಕಿಲೋಮೀಟರ್ ಅಂತರದಲ್ಲಿ ಇರುವ ಊರು ಯತ್ನಾಳ. ಅಷ್ಟೇನು ಫಲವತ್ತಾದ ಜಮೀನುಗಳಿರುವ ಊರಲ್ಲ. ಊರಲ್ಲಿಯ ಬಹುಭಾಗ ಹೊಲಗಳು ಗೌಡ್ರಿಗೆ ಸೇರಿವೆ. ಸಾಕಷ್ಟು ಜಮೀನಿದ್ದರೂ ಆರ್ಥಿಕವಾಗಿ ಕೈ ಹಿಡಿಯುತ್ತಿರಲಿಲ್ಲ ಗೌಡ್ರ ಹೊಲಗಳು. ಈ ಮನೆತನದಲ್ಲಿ ಒಬ್ಬರಾದ ರಾಮನಗೌಡರು ಯತ್ನಾಳ ಬಿಟ್ಟು ವಿಜಾಪುರ ಸೇರಿಕೊಂಡರು. ವಿವಿಧ ದಂಧೆಗಳಿಗೆ ಕೈ ಹಾಕಿದರು. ಅವುಗಳಲ್ಲಿ ಕಾಂಟ್ರಾಕ್ಟ ಬಸ್ಸುಗಳನ್ನು ಓಡಿಸುವುದು ಒಂದು. ಬಸ್ಸುಗಳು ಗೌಡ್ರ ಕೈ ಹಿಡಿದವು. ಕೆಲವೇ ದಿನಗಳಲ್ಲಿ ರಾಮನಗೌಡ್ರು ಹತ್ತಿಪತ್ತು ಬಸ್ಸುಗಳ ಒಡೆಯರಾದರು. ರಾಜ್ಯ ಸರ್ಕಾರದ ಕೆ.ಎಸ್.ಆರ್.ಟಿ.ಸಿ ಬಸ್ಸುಗಳಿಗೆ ಟಕ್ಕರ್ ಕೊಡುವಷ್ಟು ಪ್ರಬಲರಾದರು. ಆದರೆ ದೇವರಾಜ ಅರಸ್ ಎಂಬ ಸಾಮಾಜಿಕ ನಾಯಕರು ಪ್ರೈವೆಟ್ ಬಸ್ಸುಗಳನ್ನು ರಾಷ್ಟ್ರೀಕರಣ ಮಾಡಿಬಿಟ್ಟರು. ಗೌಡರ ಎಲ್ಲಾ ಬಸ್ಸುಗಳು ಸರ್ಕಾರದ ವಶವಾದವು.Vijayapura MLA Basanagouda Patil Yatnal responds to BJP notice, criticises  Karnataka leadership, urges party reforms - Karnataka News | India Today

Read this – Life Story of Basavaraj Horatti ; ಬಸವರಾಜ ಹೊರಟ್ಟಿ| Kannada Folks

ರಾಮನಗೌಡ್ರಿಗೆ ಕೆಲಸ ಇಲ್ಲದಾಯಿತು. ರಾಜಕೀಯದಲ್ಲಿ ಕೈ ಆಡಿಸೋಣ ಎಂದು ಆ ಕ್ಷೇತ್ರಕ್ಕೆ ಬಂದರು. ವಿಜಾಪುರದ ರಾಜಕೀಯ ಎಂದರೆ ಗೌಡ್ರ ಗದ್ಲ. ಜಿಲ್ಲೆಯ ಮೀಸಲು ಕ್ಷೇತ್ರಗಳನ್ನು ಬಿಟ್ಟರೆ ಎಲ್ಲ ಕ್ಷೇತ್ರಗಳಲ್ಲಿಯೂ ಗೌಡ್ರೇ ಶಾಸಕರು. ಇವರಲ್ಲಿ ದೈತ್ಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ್ದರು ಚಾಂದಕೋಟೆಗೌಡರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷಕ್ಕೆ ಇಂಡಿ ಕ್ಷೇತ್ರದಲ್ಲಿ ಚಳ್ಳೆಹಣ್ಣು ತಿನಿಸಿ ಸ್ವತಂತ್ರ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದವರು. ಶಾಸಕನಾಗಿ ಮೂರು ವರ್ಷಗಳು ಮುಗಿಯುವದರೊಳಗಾಗಿ ಲೋಕಸಭೆ ಚುನಾವಣೆ ಘೋಷಣೆಯಾಗಿದ್ದವು. ಆಗ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದವರು ಹಿರಿಯ ಮುತ್ಸದ್ದಿ ದುಭೆ ಸಾಹೇಬರು. ದುಭೆ ಸಾಹೇಬರೇನು ಸಾಮಾನ್ಯರಲ್ಲ. ಪ್ರಧಾನಿ ನೆಹರು ಅವರೊಂದಿಗೆ ಸಂಪರ್ಕ ಇಟ್ಟುಕೊಂಡ ಸ್ವಾತಂತ್ರ್ಯಸೇನಾನಿ. ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ನಾಯಕರು. ಅವರೆದುರು ಸ್ಪರ್ಧಿಸುವ ತಾಕತ್ತು ಯಾರಿಗಿತ್ತು? ಯಾರಿಗೂ ಇಲ್ಲ ಎಂದುಕೊಂಡಿದ್ದರು ಮೈಸೂರು ರಾಜ್ಯದ ಮುಖ್ಯಮಂತ್ರಿ ನಿಜಲಿಂಗಪ್ಪನವರೂ ಸಹ.

ಆದರೆ ಆ ತಾಕತ್ತಿತ್ತು ಚಾಂದಕೋಟೆಗೌಡರಿಗೆ. ಶಾಸಕನಾಗಲು ಈಗಾಗಲೇ 150 ಎಕರೆ ಜಮೀನು ಕಳೆದುಕೊಂಡಿದ್ದರು. “ದುಭೆ ಸಾಹೇಬರನ್ನು ಎದುರಿಸುವ ಶಕ್ತಿ ನಿಮಗೊಬ್ಬರಿಗೆ ಮಾತ್ರ” ಎಂದಿದ್ದರು ಕಾಂಗ್ರೆಸ್ಸೇತರ ಸ್ಥಳೀಯ ನಾಯಕರು. “ಎವ್ವಾ, ನೆಹರೂನ ಕಾಂಗ್ರೆಸ್ ಪಕ್ಷದ ಎದುರು ಇಲೆಕ್ಷನ್ನಿಗೆ ನಿಲ್ಲು ಅಲ್ಲಾಕತ್ತ್ಯಾರ ಏನ ಮಾಡಲಿ” ಎಂದು ತಾಯಿಯನ್ನು ಕೇಳಿದರು ಶಾಸಕರು.

“ಆಳೂ ಗಂಡಸಿಗೆ ನೂರು ಮಂದಿ ಹೆಂಡ್ರಂತ… ನನ್ನೇನ ಕೇಳತಿ… ಇನ್ನೊಂದು ದೊನಸೆ ಎಕರೆ ಹೊಲ ಹೋಗಲಿ ನಾಮಿನೇಶನ್ ಹಾಕಿ ಬಾ ಹೋಗು” ಎಂದಿದ್ದರಂತೆ ದೊಡ್ಡ ಗೌಡಶಾನಿ.ಚಾಂದಕೋಟೆಗೌಡರು ಲೋಕಸಭೆಯ ಅಭ್ಯರ್ಥಿಯಾದರು. ದುಭೆ ಸಾಹೇಬರು ಸೋತರು. ಗೌಡ್ರು ಗೆದ್ದರು. ಸಂಸದರಾಗಿ ಪ್ರಮಾಣ ವಚನ ಸ್ವಿಕರಿಸಿದ ಕೆಲವೇ ತಿಂಗಳಲ್ಲಿ ಹೃದಯಾಘಾತದಿಂದ ಇಹಲೋಕ ತೊರೆದರು, ವಿಜಾಪುರ ಜಿಲ್ಲೆಯ ಜನಪ್ರಿಯ ಗೌಡ್ರು.

“ಚಾಂದಕೋಟೆಗೌಡರ ಸ್ಥಾನ ನಾನು ತುಂಬತೀನಿ” ಎಂದು ತೆರವಾದ ಲೋಕಸಭೆಯ ಸ್ಥಾನ ತುಂಬಲು ಬಂದರು ಯತ್ನಾಳದ ರಾಮನಗೌಡ್ರು. ಆದರೆ ಜನ ಇವರ ಮಾತನ್ನು ನಂಬಲಿಲ್ಲ. ಚುನಾವಣೆಯಲ್ಲಿ ಯತ್ನಾಳಗೌಡ್ರು ಸೋತರು. ರಾಜಕೀಯದಿಂದ ನಿವೃತ್ತಿಯಾದರು.ರಾಮನಗೌಡರ ಐದು ಮಕ್ಕಳಲ್ಲಿ ಎರಡನೆಯವರೇ ಇಂದಿನ ಯತ್ನಾಳ್ ಬಸನಗೌಡರು. ಸಾಹಿತಿ ರಂಜಾನ ದರ್ಗಾರವರು ಹೇಳುವಂತೆ ನಾಚಿಕೆ ಸ್ವಭಾವದ ಬಸನಗೌಡ ರಾಜ್ಯ ನಾಯಕನಾಗುತ್ತಾನೆ ಎಂದು ನಾವ್ಯಾರು ಎಣಿಸಿರಲಿಲ್ಲ. ಆದರೆ ನಾಚಿಕೆ ಸ್ವಭಾವದ, ಮಾತುಗಾರನಲ್ಲದ, ನೆರೆಮನೆಯ ಹುಡುಗ ಬಿಜಾಪುರ ನಗರದ ಶಾಸಕರಾದರು. ಮುಂದೆ ಸಂಸದರಾದರು, ಚಿಕ್ಕ ವಯಸ್ಸಿನಲ್ಲಿಯೇ ಕೇಂದ್ರ ಸರ್ಕಾರದ ಮಂತ್ರಿಯೂ ಆಗಿಬಿಟ್ಟರು.

ನಾಚಿಕೆ ಸ್ವಭಾವದ ಬಸನಗೌಡರು ಬದಲಾದರು. ವಿರೋಧಿಗಳು ಇವರನ್ನು ‘ಸಡಿಲಬಾಯಿ’ಯ ಯತ್ನಾಳ ಎನ್ನುವಷ್ಟರ ಮಟ್ಟಿಗೆ ಬದಲಾದರು. ಗೌಡರು ಇನ್ನೊಂದು ಯಡವಟ್ಟು ಮಾಡಿಕೊಂಡರು. ವಿಜಾಪೂರ ಕ್ಷೇತ್ರವನ್ನು ತೊರೆದು ದೇವರ ಹಿಪ್ಪರಗಿ ಕ್ಷೇತ್ರಕ್ಕೆ ವಲಸೆ ಹೋದರು. ಅಲ್ಲಿ ಬಳ್ಳಾರಿಯ ಗಣಿಯ ದೂಳು ಇವರ ಕಣ್ಣು ರೆಪ್ಪೆಯ ಒಳ ಸೇರಿತು. ಕಣ್ಣು ತೆರೆಯಲು ಅವಕಾಶವನ್ನೇ ನೀಡಲಿಲ್ಲ.

ಸೋತ ನಂತರ ಅಧಿಕಾರದಲ್ಲಿದ್ದಾಗ ಆಡಿದ ಮಾತುಗಳು ಇವರಿಗೆ ತಿರುಗು ಬಾಣವಾದವು. ‘ಆನೆ ಬಿದ್ದಾಗ ಆಳಿಗೊಂದು ಕಲ್ಲಂತೆ’… ಗೌಡ್ರರನ್ನು ದೂರ ಸರಿಸಿತ್ತು ಅವರ ಮಾತೃ ಪಕ್ಷ. ತನಗೆ ಚಡ್ಡಿ ತೊಡಿಸಿ ಕೈಯಲ್ಲಿ ದೊಣ್ಣೆ ನೀಡಿದ ಪಕ್ಷವು ತನ್ನನ್ನು ಮರೆಯುತ್ತದೆ ಎಂದು ಕನಸಿನಲ್ಲಿಯೂ ಕಂಡಿರಲಿಲ್ಲ ಯತ್ನಾಳ್. ಹತಾಶರಾದರು ಯತ್ನಾಳ ಗೌಡರು. ಜೆಡಿಎಸ್ ಬಾಗಿಲು ಬಡಿದರು. ಸ್ಕಲ್ ಕ್ಯಾಪ್ ಧರಿಸಿದರು. ‘ಟಿಪ್ಪು ಮೈಸೂರಿನ ಹುಲಿ’ ಎಂದರು. ‘ಹಿಂದೂ ಮುಸ್ಲಿಂ ಬಾಯಿ ಬಾಯಿ’ ಎಂದರು. ಜನ ನಂಬಲಿಲ್ಲ. ಸಣ್ಣ ವಯಸ್ಸಿನಲ್ಲಿ ದಿಲ್ಲಿಯ ದೊರೆ ಬಿಜಾಪುರದ ಮನೆಯ ಮೂಲೆಯಲ್ಲಿ ತಣ್ಣಗೆ ಮಲಗಿಬಿಟ್ಟರು.ಕಾಲ ಬದಲಾಗುತ್ತಲೆ ಇರುತ್ತದೆ. ಕೆಲ ವರ್ಷಗಳ ನಂತರ ಕರ್ನಾಟಕದ ಮೇಲ್ಮನೆಯ ಚುನಾವಣೆ ಬಂತು. ‘ಬಸನಗೌಡ್ರಿಗೆ ಅವಕಾಶ ನೀಡೋಣ’ ಎಂದರು ಪಕ್ಷಾತೀತವಾಗಿ ಜಿಲ್ಲೆಯ ಎಲ್ಲ ರಾಜಕೀಯ ಮುಖಂಡರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಎಲ್ಲರಿಗೂ ಬೇಕಾಗಿ ಬಿಟ್ಟಿದ್ದರು ಯತ್ನಾಳ್. ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾಗಿ ಎರಡನೆಯ ಇನ್ನಿಂಗ್ಸ್ ಪ್ರಾರಂಭಿಸಿದರು ಯತ್ನಾಳ ಗೌಡರು.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×