E-Swathu 2.0: How to Get E-Khata? – ಇ-ಸ್ವತ್ತು 2.0: ಇ-ಖಾತಾ ಹೇಗೆ ಪಡೆಯುವುದು?
ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿಗಳ ಆಡಳಿತ ಮತ್ತು ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಸುಧಾರಿತ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿದೆ. ಈ ಹೊಸ ಉಪಕ್ರಮವು 97 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಆಸ್ತಿಗಳನ್ನು ಸಕ್ರಮಗೊಳಿಸಿ ಅಧಿಕೃತ ತೆರಿಗೆ ವ್ಯಾಪ್ತಿಗೆ ತರುವ ಗುರಿ ಹೊಂದಿದೆ. ಇದು ಅಸ್ತಿತ್ವದಲ್ಲಿರುವ ಪಂಚತಂತ್ರ ಸಾಫ್ಟ್‌ವೇರ್‌ನ ನವೀಕರಿಸಿದ ಆವೃತ್ತಿಯಾಗಿದೆ
ಏನಿದು ಇ- ಇ-ಸ್ವತ್ತು 2.0 ತಂತ್ರಾಂಶ
ಇ-ಸ್ವತ್ತು ಎಂಬುದು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ನಿರ್ವಹಿಸುವ ಒಂದು ಆನ್‌ಲೈನ್ ಪೋರ್ಟಲ್ ಆಗಿದ್ದು, ಗ್ರಾಮೀಣ ಪ್ರದೇಶದ ಆಸ್ತಿ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ ನಿರ್ವಹಿಸಲು ಸಹಕಾರಿಯಾಗಿದೆ. ಇದರ ಪ್ರಮುಖ ಉದ್ದೇಶ ಆಸ್ತಿ ವಹಿವಾಟುಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರುವುದು, ವಂಚನೆ ಮತ್ತು ಅನಧಿಕೃತ ನಿವೇಶನಗಳ ನೋಂದಣಿಯನ್ನು ನಿಯಂತ್ರಿಸುವುದಾಗಿದೆ. ಇ-ಸ್ವತ್ತು ಗ್ರಾಮೀಣ ಭಾಗದಲ್ಲಿರುವ ಕೃಷಿಯೇತರ ಖಾಲಿ ಜಾಗಗಳು ಮತ್ತು ಮನೆ ನಿರ್ಮಾಣ ಮಾಡಿರುವ ಜಾಗಗಳಿಗೆ ಅಧಿಕೃತ ಮಾಲೀಕತ್ವದ ಪ್ರಮಾಣ ಪತ್ರವನ್ನು ಡಿಜಿಟಲ್ ರೂಪದಲ್ಲಿ ಹೊಂದುವುದಾಗಿದೆ. ಈ ಪೋರ್ಟಲ್ ಮೂಲಕ ನಾಗರಿಕರು ಫಾರ್ಮ್-9 ಮತ್ತು ಫಾರ್ಮ್-11 ಎಂಬ ಪ್ರಮುಖ ಇ-ಖಾತಾ ದಾಖಲೆಗಳನ್ನು ಪಡೆಯಬಹುದಾಗಿದೆ.
97 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಆಸ್ತಿಗಳಿಗೆ ಇ-ಖಾತಾ ನೀಡುವ ಗುರಿ
ಆರಂಭಿಕ ಹಂತದಲ್ಲಿ, ಪಂಚಾಯತ್ ರಾಜ್ ಇಲಾಖೆಯು 6.5 ಲಕ್ಷಕ್ಕೂ ಹೆಚ್ಚು ಆಸ್ತಿಗಳನ್ನು ಈ ವ್ಯಾಪ್ತಿಯೊಳಗೆ ತರಲು ಗಮನಹರಿಸುತ್ತಿದೆ. ಈ ಇ-ಸ್ವತ್ತು ಪ್ರಮಾಣ ಪತ್ರದಲ್ಲಿ ಆ ಜಾಗದ ಜಿಪಿಎಸ್ ಫೋಟೋ, ಒಟ್ಟು ವಿಸ್ತೀರ್ಣ, ಮತ್ತು ಮಾಲೀಕರ ಸಂಪೂರ್ಣ ವಿವರಗಳಂತಹ ಮಾಹಿತಿಯನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಿಸಲಾಗುತ್ತದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಇ-ಖಾತಾ ವಿತರಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ರಾಜ್ಯ ಸರ್ಕಾರವು ಇ-ಸ್ವತ್ತು ಉಪಕ್ರಮಕ್ಕೆ ವಿಶೇಷ ಬೆಂಬಲ ವ್ಯವಸ್ಥೆಯನ್ನು ಸ್ಥಾಪಿಸಿದೆ. ಇತ್ತೀಚೆಗೆ ಪ್ರಾರಂಭಿಸಲಾದ ಈ ಕಾರ್ಯಕ್ರಮವು ರಾಜ್ಯದ 97 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಆಸ್ತಿಗಳನ್ನು ಸಕ್ರಮಗೊಳಿಸಿ ಅಧಿಕೃತ ತೆರಿಗೆ ವ್ಯಾಪ್ತಿಗೆ ತರುವ ಗುರಿ ಹೊಂದಿದೆ.
ಇ-ಸ್ವತ್ತು 2.0 ಮುಖ್ಯ ಉದ್ದೇಶಗಳು ಮತ್ತು ವೈಶಿಷ್ಟ್ಯಗಳು
- ಪಾರದರ್ಶಕತೆ: ಇ-ಸ್ವತ್ತು ವೇದಿಕೆ ಆಸ್ತಿ ವಿವರಗಳನ್ನು ಡಿಜಿಟಲ್ ದಾಖಲೆಗಳೊಂದಿಗೆ ಸಂಯೋಜಿಸಿ, ದಾಖಲಾತಿಯನ್ನು ಸುಗಮಗೊಳಿಸುತ್ತದೆ, ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಮತ್ತು ಮಾಲೀಕತ್ವದ ಪರಿಶೀಲನೆಯನ್ನು ಸರಳಗೊಳಿಸುತ್ತದೆ.
- ಆಸ್ತಿ ಸಕ್ರಮಗೊಳಿಸುವಿಕೆ: ಸುಮಾರು 90 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಆಸ್ತಿಗಳನ್ನು ಇ-ಖಾತಾ ಮೂಲಕ ಅಧಿಕೃತ ತೆರಿಗೆ ವ್ಯಾಪ್ತಿಗೆ ತರಲು ಇದು ಒಂದು ಪ್ರಮುಖ ಹೆಜ್ಜೆಯಾಗಿದೆ.
- ಸೇವೆಗಳ ಪುನರಾರಂಭ: ಇ-ಸ್ವತ್ತು 2.0 ಪ್ರಾರಂಭದಿಂದಾಗಿ, ಕೆಲವು ಪ್ರದೇಶಗಳಲ್ಲಿ ಸ್ಥಗಿತಗೊಂಡಿದ್ದ ಫಾರ್ಮ್ 11B ಖಾತಾ ವಿತರಣೆ ಮತ್ತು ನಿವೇಶನ ನೋಂದಣಿಯಂತಹ ಸೇವೆಗಳು ಪುನರಾರಂಭಗೊಂಡಿವೆ.
- ನೋಂದಣಿ ಇಲಾಖೆಯೊಂದಿಗೆ ಸಂಯೋಜನೆ: ಈ ವೇದಿಕೆಯು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ಸಾಫ್ಟ್‌ವೇರ್‌ನೊಂದಿಗೆ ಸಂಯೋಜನೆಗೊಂಡಿದ್ದು, ಕೃಷಿಯೇತರ ಆಸ್ತಿಗಳ ಮಾರಾಟ ನೋಂದಣಿಯನ್ನು ತಡೆರಹಿತವಾಗಿ ಮಾಡಲು ಸಹಾಯ ಮಾಡುತ್ತದೆ.
ಫಾರ್ಮ್ 9 ಎಂದರೇನು?
ಫಾರ್ಮ್ 9 ಎಂದರೆ, ಗ್ರಾಮೀಣ ಕರ್ನಾಟಕದ ಕೃಷಿಯೇತರ ಆಸ್ತಿಗಳಿಗೆ ಅಗತ್ಯವಾದ ಒಂದು ಕಾನೂನು ದಾಖಲೆಯಾಗಿದೆ. ಇ-ಸ್ವತ್ತು ಪೋರ್ಟಲ್ ಅಡಿಯಲ್ಲಿ ಗ್ರಾಮ ಪಂಚಾಯತ್‌ನಿಂದ ನೀಡಲಾದ ಈ ದಾಖಲೆಯು, ಕೃಷಿಯೇತರ ಆಸ್ತಿಯ ಮಾಲೀಕತ್ವದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿಯೇತರ ಭೂಮಿಯನ್ನು ಖರೀದಿ ಅಥವಾ ಮಾರಾಟ ಮಾಡುವಾಗ ಇದು ಕಡ್ಡಾಯ. ಈ ಫಾರ್ಮ್ ಇಲ್ಲದೆ ಆಸ್ತಿ ವಹಿವಾಟು ಕಾನೂನುಬದ್ಧವಾಗಿ ಮಾನ್ಯವಾಗಿರುವುದಿಲ್ಲ
ಫಾರ್ಮ್ 11 ಬಿ ಎಂದರೇನು?
ಫಾರ್ಮ್ 11 ಬಿ ಎಂದರೆ, ಗ್ರಾಮ ಪಂಚಾಯತ್ ಪ್ರದೇಶದಲ್ಲಿನ ಆಸ್ತಿ ಮಾಲೀಕತ್ವದ ಕಾನೂನು ಪುರಾವೆ. ಗ್ರಾಮ ಪಂಚಾಯತ್ ಅಧಿಕಾರಿಗಳಿಂದ ನೀಡಲಾಗುವ ಇದು ಆಸ್ತಿಯ ಕಾನೂನುಬದ್ಧ ಮಾಲೀಕತ್ವವನ್ನು ಸಾಬೀತುಪಡಿಸುವ ಅಧಿಕೃತ ದಾಖಲೆ. ಇದು ಮಾಲೀಕರ ಹೆಸರು, ಸರ್ವೆ ಸಂಖ್ಯೆ, ಭೂ ವರ್ಗೀಕರಣ ಮತ್ತು ವಹಿವಾಟಿನ ವಿವರಗಳನ್ನೂ ಒಳಗೊಂಡಿರುತ್ತದೆ. ಆಸ್ತಿಯನ್ನು ಮಾರಾಟ ಮಾಡುವುದು ಅಥವಾ ವರ್ಗಾಯಿಸುವುದು. ಬ್ಯಾಂಕ್ ಸಾಲಗಳನ್ನು ಪಡೆಯುವುದು. ಕಾನೂನು ವಿಷಯಗಳಲ್ಲಿ ಮಾಲೀಕತ್ವವನ್ನು ಸ್ಥಾಪಿಸುವುದು. ಅಭಿವೃದ್ಧಿ ಯೋಜನೆಗಳಿಗೆ ಅನುಮತಿಗಳನ್ನು ಪಡೆಯುವುದಕ್ಕೆ ಫಾರ್ಮ್ 11 ಬಿ ಅಗತ್ಯವಾಗಿದೆ. ಫಾರ್ಮ್ 11 ಬಿ ಇಲ್ಲದಿದ್ದರೆ, ಆಸ್ತಿಯ ವರ್ಗಾವಣೆಯನ್ನು ಪೂರ್ಣಗೊಳಿಸಲು ಮತ್ತು ಕಾನೂನು ಕಾರ್ಯಗಳನ್ನು ನಿರ್ವಹಿಸಲು ಮಾಲೀಕರಿಗೆ ಕಷ್ಟವಾಗುತ್ತದೆ.
ನಾಗರಿಕರಿಗೆ ಮೀಸಲಾದ ಸಹಾಯ ಕೇಂದ್ರ ಸ್ಥಾಪನೆ
ಇ-ಖಾತಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಪ್ರಶ್ನೆಗಳು ಮತ್ತು ತಾಂತ್ರಿಕ ಸಮಸ್ಯೆಗಳನ್ನು ನಿಭಾಯಿಸಲು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಯಶವಂತಪುರದಲ್ಲಿ ಖಾಸಗಿ ಸಂಸ್ಥೆಯ ಮೂಲಕ ವಿಶೇಷ ಕಾಲ್ ಸೆಂಟರ್ ಅನ್ನು ಸ್ಥಾಪಿಸಿದೆ. ಆರಂಭಿಕ ಹಂತದಲ್ಲಿ ಕಾಲ್ ಸೆಂಟರ್‌ಗೆ ಸಹಾಯ ಮಾಡಲು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಒಟ್ಟು 34 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನುನಿಯೋಜಿಸಲಾಗಿದೆ. ಈ ಪಿಡಿಒಗಳು ಆಪರೇಟರ್‌ಗಳಿಗೆ ಇ-ಸ್ವತ್ತು ಪೋರ್ಟಲ್ ಮತ್ತು ನಿಯಮಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು, ಇ-ಖಾತಾ ರಚಿಸುವ ವಿಧಾನಗಳನ್ನು ವಿವರಿಸಲು ಮತ್ತು ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರಿಸಲು ಸಹಾಯ ಮಾಡಲಿದ್ದಾರೆ. ಕರ್ನಾಟಕ ಪಂಚಾಯತ್ ರಾಜ್ ಆಯುಕ್ತರಾದ ಅರುಂಧತಿ ಚಂದ್ರಶೇಖರ್ ಅವರ ಪ್ರಕಾರ, ಪ್ರತಿ ಪಿಡಿಒ ಡಿಸೆಂಬರ್ 2 ರಿಂದ ಜನವರಿ 4 ರವರೆಗೆ ಸರದಿ ಆಧಾರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಆ ನಂತರ ಕಾಲ್ ಸೆಂಟರ್ ತಂಡವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಅರ್ಹತಾ ಮಾನದಂಡಗಳೇನು?
- ಗ್ರಾಮೀಣ ಆಸ್ತಿಗಳಿಗೆ 11 ‘ಬಿ’ ಖಾತೆ ಪಡೆಯಲು ನಿವೇಶನದಾರರಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ.
- 7-4-2025ರ ದಿನಾಂಕಕ್ಕಿಂತ ಹಿಂದೆ ನಿವೇಶನ ನೋಂದಣಿಯಾಗಿದ್ದರೆ ಅಥವಾ ಮನೆ ನಿರ್ಮಿಸಿದ್ದರೆ (ವಿದ್ಯುತ್ ಸಂಪರ್ಕ ಪಡೆದಿರಬೇಕು) ಮಾತ್ರ ಇ-ಸ್ವತ್ತು ತಂತ್ರಾಂಶದ ಮೂಲಕ 11 ‘ಬಿ’ ಖಾತೆ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ಗ್ರಾಮ ಪಂಚಾಯತ್ ಕಚೇರಿಯಲ್ಲಿ ಅರ್ಜಿ ಸಲ್ಲಿಕೆ ಹೇಗೆ?
- ನಿಮ್ಮ ಸ್ಥಳೀಯ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿ.
- ಜಿಲ್ಲಾ ಪಂಚಾಯತ್ ಸಿಬ್ಬಂದಿ ನಿಮ್ಮ ಪರವಾಗಿ ಇ-ಸ್ವತ್ತು ಪೋರ್ಟಲ್‌ನಲ್ಲಿ ಆಸ್ತಿ ಮತ್ತು ಮಾಲೀಕರ ವಿವರಗಳನ್ನು ಭರ್ತಿ ಮಾಡುತ್ತಾರೆ.
- ಅಗತ್ಯ ದಾಖಲೆಗಳನ್ನು ಅದೇ ಸಿಬ್ಬಂದಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ.
- ಸಲ್ಲಿಸಿದ ಅರ್ಜಿಯನ್ನು ಆರಂಭದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಮತ್ತು ನಂತರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಿಶೀಲಿಸುತ್ತಾರೆ.
- ಈ ಸಮಗ್ರ ಪರಿಶೀಲನೆ ಪ್ರಕ್ರಿಯೆಯು 45 ದಿನಗಳವರೆಗೂ ನಡೆಯುವ ಸಾಧ್ಯತೆಯಿದೆ.
- ಒಮ್ಮೆ ನಿಮ್ಮ ಅರ್ಜಿಯು ಅನುಮೋದನೆಗೊಂಡರೆ, ಪಿಡಿಒ ಅವರು ಅದನ್ನು ಡಿಜಿಟಲ್ ಸಹಿ ಮಾಡುತ್ತಾರೆ.
- ನಂತರ ನೀವು ಇ-ಸ್ವತ್ತು ಪೋರ್ಟಲ್‌ನಲ್ಲಿ ನಿಮ್ಮ ಆಸ್ತಿ ವಿವರಗಳನ್ನು ಹುಡುಕಿ, ಅನುಮೋದಿತ ಫಾರ್ಮ್ 9 ಅಥವಾ ಫಾರ್ಮ್ 11B ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಆನ್‌ಲೈನ್ ಸೇವೆಗಳನ್ನು ಪಡೆಯುವುದು ಹೇಗೆ?
- ನಾಗರಿಕರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ವಹಿಸುವ ಅಧಿಕೃತ ಇ-ಸ್ವತ್ತು ವೆಬ್‌ಸೈಟ್ eswathu.karnataka.gov.in/ ಮೂಲಕ ಆಸ್ತಿ ದಾಖಲೆಗಳಿಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಪ್ರವೇಶಿಸಬಹುದು.
- ಹೋಮ್‌ಪೇಜ್‌ನಲ್ಲಿ ಲಭ್ಯವಿರುವ ಸೌಲಭ್ಯವನ್ನು ಬಳಸಿ ಪ್ರಮಾಣಪತ್ರ ಸಂಖ್ಯೆಯನ್ನು ನಮೂದಿಸುವ ಮೂಲಕ ಫಾರ್ಮ್ 9 ಮತ್ತು ಫಾರ್ಮ್ 11 ದಾಖಲೆಗಳ ನೈಜತೆಯನ್ನು ಪರಿಶೀಲಿಸಬಹುದು.
- ಮೆನುವಿನಲ್ಲಿರುವ ‘ನಿಮ್ಮ ಆಸ್ತಿಯನ್ನು ಹುಡುಕಿ’ ಆಯ್ಕೆಯನ್ನು ಕ್ಲಿಕ್ ಮಾಡಿ ಜಿಲ್ಲೆ, ಗ್ರಾಮ, ಗ್ರಾಮ ಪಂಚಾಯತಿ ಮತ್ತು ಆಸ್ತಿ ಐಡಿ ವಿವರಗಳನ್ನು ಒದಗಿಸುವ ಮೂಲಕ ಆಸ್ತಿ ವಿವರಗಳನ್ನು ಹುಡುಕಬಹುದು.
- ಆಸ್ತಿ ಮಾಲೀಕರು ಪೋರ್ಟಲ್ ಮೂಲಕ ಇ-ಖಾತಾಕ್ಕಾಗಿ (ಡಿಜಿಟಲ್ ಮಾಲೀಕತ್ವ ಮತ್ತು ಮೌಲ್ಯಮಾಪನ ದಾಖಲೆ) ಅರ್ಜಿ ಸಲ್ಲಿಸಬಹುದು.
ಅಗತ್ಯವಿರುವ ದಾಖಲೆಗಳು
ಅರ್ಜಿ ಸಲ್ಲಿಸುವ ಮೊದಲು ಈ ಕೆಳಗಿನ ಪ್ರಮುಖ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಿ:
- ಸೇಲ್ ಡೀಡ್
- ಇತ್ತೀಚಿನ ಆಸ್ತಿ ತೆರಿಗೆ ಪಾವತಿ ರಶೀದಿಗಳು
- ಎನ್‌ಕಂಬರೆನ್ಸ್ ಸರ್ಟಿಫಿಕೇಟ್
- ಭೂ ಸರ್ವೇ ದಾಖಲೆಗಳು
- ಗುರುತು/ವಿಳಾಸ ಪುರಾವೆಗಳು (ಆಧಾರ್, ವೋಟರ್ ಐಡಿ, ಪ್ಯಾನ್)
- ಭಾವಚಿತ್ರಗಳು
Support Us 


