Cubbon Park Flower show – ಕಬ್ಬನ್ಪಾರ್ಕ್
ಕಬ್ಬನ್ ಉದ್ಯಾನದಲ್ಲಿ ನಡೆಯುತ್ತಿರುವ ಪುಷ್ಪ ಪ್ರದರ್ಶನಕ್ಕೆ ವಾರಾಂತ್ಯದ ಶನಿವಾರದಂದು ಜನಸಾಗರವೇ ಹರಿದುಬಂದಿದ್ದು, ಪುಷ್ಪ ಪ್ರದರ್ಶನ ವೀಕ್ಷಣೆಗೆ ಬೆಳಗ್ಗೆಯಿಂದ ಸಂಜೆವರೆಗೆ ಸಾರ್ವಜನಿಕರ ನೂಕು ನುಗ್ಗಲು ಕಂಡು ಬಂದಿತ್ತು.ಪುಷ್ಪ ಪ್ರದರ್ಶನದಲ್ಲಿ ಹೂವಿನ ರಥ, ಚಿಟ್ಟೆ, ಆನೆ, ಹುಲಿ ಹಾಗೂ ಡಾಲ್ಫಿನ್ ನೋಡುಗರ ಕಣ್ಮನ ಸೆಳೆಯುತ್ತಿದ್ದು, ಇವುಗಳು ಸೆಲ್ಫೀ ತಾಣವಾಗಿ ಮಾರ್ಪಟ್ಟಿವೆ.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮತ್ತು ಕನ್ನಡ ಲಲಿತಕಲಾ ಅಕಾಡೆಮಿ ವರ್ಣಚಿತ್ರಗಳನ್ನು ಪ್ರದರ್ಶಿಸುತ್ತಿದ್ದು, 100 ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಿವೆ. ಇದಲ್ಲದೆ, ಸ್ಥಳದಲ್ಲಿರುವ ಆಹಾರ ಮಳೆಗಳು ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ.
ಭಾನುವಾರ ರಜಾ ದಿನ ಆಗಿರುವುದರಿಂದ ಲಕ್ಷಾಂತರ ಜನ ಪ್ರದರ್ಶನದ ವೀಕ್ಷಣೆಗೆ ಬರುವ ನಿರೀಕ್ಷೆಯಿದ್ದು, ಟಿಕೆಟ್ ವಿತರಣೆ ಮತ್ತು ವಾಹನಗಳ ಪಾರ್ಕಿಂಗ್ ವ್ಯವಸ್ಥೆಯಲ್ಲಿ ತೋಟಗಾರಿಕೆ ಇಲಾಖೆ ಸ್ವಲ್ಪ ಬದಲಾವಣೆ ಮಾಡಿದೆ.
ಕಳೆದ ಮೂರು ದಿನಗಳಿಂದ ಪುಷ್ಪ ಪ್ರದರ್ಶನದ ಸಮೀಪದಲ್ಲೇ ಪ್ರವೇಶ ಟಿಕೆಟ್ಗಳನ್ನು ವಿತರಿಸಲಾಗುತ್ತಿತ್ತು. ಆದರೆ, ಶನಿವಾರ ಒಂದು ಲಕ್ಷಕ್ಕೂ ಹೆಚ್ಚು ಜನಪುಷ್ಪಪ್ರದರ್ಶನ ವೀಕ್ಷಣೆಗೆ ಆಗಮಿಸಿದ್ದರಿಂದ ಕಬ್ಬನ್ಪಾರ್ಕ್ ಅಧಿಕಾರಿ, ಸಿಬ್ಬಂದಿ ತಬ್ಬಿಬ್ಬಿಗೆ ತುತ್ತಾಗಿದ್ದು, ನಿರ್ವಹಣೆಗೆ ಪರದಾಡಿದರು.
ಭಾನುವಾರ ಪುಷ್ಪ ಪ್ರದರ್ಶನಕ್ಕೆ ಆಗಮಿಸುವ ವೀಕ್ಷಕರಿಗೆ ಹಡನ್ ಸರ್ಕಲ್ ಗೇಟ್, ಯುಬಿ ಸಿಟಿ ಸರ್ಕಲ್ ಗೇಟ್, ಹೈಕೋರ್ಟ್ ಸಮೀಪದ ಗೇಟ್, ಅನಿಲ್ ಕುಂಬ್ಳೆ ವೃತ್ತದ ಗೇಟ್ ಮತ್ತು ಬಾಲಭವನ ಸಮೀಪದ ಗೇಟ್ ಬಳಿ ಟಿಕೆಟ್ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆ ಕೇವಲ ಭಾನುವಾರ ಮಾತ್ರ ಇರಲಿದೆ.
ಸಂಜೆ 6ರವರೆಗೆ ಮಾತ್ರ ಪ್ರವೇಶ
ಕಬ್ಬನ್ ಪಾರ್ಕ್ನಲ್ಲಿ ನ.27ರಿಂದ ಆರಂಭವಾಗಿರುವ ಈ ಪುಷ್ಪ ಪ್ರದರ್ಶನ ಡಿ.1ರವರೆಗೆ ನಡೆಯಲಿದೆ. ಸುರಕ್ಷತೆ ದೃಷ್ಟಿಯಿಂದ ರಜಾದಿನಗಳಲ್ಲಿ ಸಂಜೆ 7 ಗಂಟೆ ಬದಲಿಗೆ ಸಂಜೆ 6 ಗಂಟೆವರೆಗೆ ಪ್ರವೇಶ ದ್ವಾರಗಳಲ್ಲಿ ಟಿಕೆಟ್ ವಿತರಿಸಲಾಗುವುದು.
ಭಾನುವಾರ ಕೂಡ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಟಿಕೆಟ್ ವಿತರಣೆ ನಡೆಯಲಿದೆ. ಉಳಿದ ದಿನಗಳಲ್ಲಿ ಸಂಜೆ 7ರವರೆಗೂ ಪ್ರದರ್ಶನ ಇರಲಿದೆ. ಶನಿವಾರ ನಡೆದ ಪುಷ್ಪ ಪ್ರದರ್ಶನವು 75,084 ಪ್ರವಾಸಿಗರನ್ನು ಆಕರ್ಷಿಸಿದ್ದು, ಒಟ್ಟು 13,07,530 ರೂ. ಆದಾಯ ಗಳಿಸಲಾಗಿದೆ ಎಂದು ಕಬ್ಬನ್ ಉದ್ಯಾನದ ಉಪ ನಿರ್ದೇಶಕಿ ಕುಸುಮಾ ಅವರು ಮಾಹಿತಿ ನೀಡಿದ್ದಾರೆ.
Support Us 


