Bengaluru LPG Adamyachetana’s Fix-ಗ್ಯಾಸಿಲ್ಲದಿದ್ದರೂ 70,000 ಮಕ್ಕಳಿಗೆ ಬಿಸಿ ಊಟ
ಅಮೆರಿಕ, ಇರಾನ್ ಹಾಗೂ ಇಸ್ರೇಲ್ ಯುದ್ಧದ ಹಿನ್ನೆಲೆ ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಎಲ್‌ಪಿಜಿ ಗ್ಯಾಸ್ ಕೊರತೆ ಹೋಟೆಲ್ ಉದ್ಯಮಕ್ಕೆ ಸಂಕಷ್ಟ ತಂದಿದೆ. ಆದರೆ ಅದಮ್ಯ ಚೇತನ ಸಂಸ್ಥೆ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಪರಿಸರ ಸ್ನೇಹಿ ವ್ಯವಸ್ಥೆಯಡಿ ಲಕ್ಷಾಂತರ ಮಕ್ಕಳಿಗೆ ಊಟ ಒದಗಿಸುತ್ತಿದೆ. 2005ರಿಂದಲೇ ಎಲ್‌ಪಿಜಿ ತೊರೆದಿರುವ ಸಂಸ್ಥೆ ದಿನಾಲೂ ಸಾವಿರಾರು ಮಕ್ಕಳಿಗೆ ಊಟ ಒದಗಿಸುತ್ತಿರುವುದು ಹೇಗೆ ಗೊತ್ತಾ?![]()
Read this : Bengaluru Warder Held for Ganja-ಒಳ ಉಡುಪಿನಲ್ಲಿ ಗಾಂಜಾ ವಾರ್ಡನ್ ಬಂಧನ
ಬೆಂಗಳೂರು, ಮಾರ್ಚ್ 12: ಅಮೆರಿಕ, ಇರಾನ್ ಹಾಗೂ ಇಸ್ರೇಲ್ ಯುದ್ಧದ ಪರಿಣಾಮವಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ (Gas Cylinder Crisis) ತೀವ್ರವಾಗಿದ್ದು, ಹೋಟೆಲ್ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಲಿಂಡರ್ ಸಿಗದೆ ಅಡುಗೆ ಮಾಡುವುದು ಹೇಗೆ, ಹೋಟೆಲ್ ನಡೆಸುವುದು ಹೇಗೆ ಎಂಬ ಆತಂಕ ಎಲ್ಲೆಡೆ ವ್ಯಾಪಿಸಿದೆ. ಗ್ಯಾಸ್ ಸರಬರಾಜಿನಲ್ಲಿ ಉಂಟಾದ ವ್ಯತ್ಯಯದಿಂದ ಹಲವು ಹೋಟೆಲ್‌ಗಳು ಮತ್ತು ಸಣ್ಣ ಉಪಹಾರ ಗೃಹಗಳು ಸಂಕಷ್ಟ ಅನುಭವಿಸುತ್ತಿವೆ. ಆದರೆ ಬೆಂಗಳೂರಿನ ಸಾಮಾಜಿಕ ಸಂಸ್ಥೆಯೊಂದಕ್ಕೆ ಮಾತ್ರ ಗ್ಯಾಸ್ ಕೊರತೆಯ ಬಿಸಿ ತಟ್ಟಿಲ್ಲ ಎಂಬುದು ವಿಶೇಷವಾಗಿದೆ.
20 ವರ್ಷಗಳ ಹಿಂದೆಯೆ ಎಲ್‌ಪಿಜಿ ಸಿಲಿಂಡರ್ಗೆ ಗುಡ್ ಬೈ!
ಈ ಗ್ಯಾಸ್ ಬಿಕ್ಕಟ್ಟಿನ ನಡುವೆಯೂ ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆ ಎಲ್‌ಪಿಜಿ ಗ್ಯಾಸ್ ಬಳಸದೇ, ಯಾವುದೇ ತೊಂದರೆಯಿಲ್ಲದೆ 70 ಸಾವಿರದಿಂದ ಒಂದು ಲಕ್ಷ ಮಕ್ಕಳಿಗೆ ಪ್ರತಿದಿನ ಬಿಸಿಯೂಟ ಸಿದ್ಧಪಡಿಸುತ್ತಿದೆ. ವಿಶೇಷವೆಂದರೆ ಈ ಅಡುಗೆಗೆ ಗ್ಯಾಸ್ ಸಿಲಿಂಡರ್ ಅಗತ್ಯವೇ ಇಲ್ಲ. ದೇಶದಾದ್ಯಂತ ವ್ಯಾಪಿಸಿರುವ ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ತಲೆಕೆಡಿಸಿಕೊಳ್ಳದ ಸಂಸ್ಥೆ ಸ್ಟೀಮ್ ಕುಕ್ಕಿಂಗ್ ಪದ್ಧತಿಯ ಮೂಲಕ ಮಕ್ಕಳಿಗೆ ಮಿಡ್ ಡೇ ಮೀಲ್ಸ್ ನೀಡುತ್ತಿದೆ. ಈಗಿರುವ ತುರ್ತು ಪರಿಸ್ಥಿತಿಯಿಂದಾಗಿ ದೇಶದ ಜನ ಕಕ್ಕಾಬಿಕ್ಕಿಯಾಗಿದ್ದರೆ, 2005ರಲ್ಲೇ ಎಲ್‌ಪಿಜಿ ಸಿಲಿಂಡರ್ ಬಳಕೆಗೆ ಗುಡ್‌ಬೈ ಹೇಳಿರುವ ಈ ಸಂಸ್ಥೆ ದೇಶದ ಮೊದಲ ಕಮ್ಯುನಿಟಿ ಕ್ಲೌಡ್ ಕಿಚನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಲಕ್ಷಾಂತರ ಜನರ ಅಡುಗೆ ಹೇಗೆ ಸಾಧ್ಯ?
ಇಲ್ಲಿ ಕಸದ ವಸ್ತುಗಳಿಂದ ತಯಾರಿಸಲಾದ ಬ್ರಿಕೆಟ್ಸ್ ಬಳಸಿ ಅಡುಗೆ ಮಾಡಲಾಗುತ್ತಿದೆ. ಹಿಂದೆ ದಿನಕ್ಕೆ 60 ಸಿಲಿಂಡರ್ ಹಾಗೂ ಸುಮಾರು 400 ಲೀಟರ್ ಡಿಸೆಲ್ ಅಗತ್ಯವಿದ್ದರೆ, ಈಗ ಪರಿಸರ ಸ್ನೇಹಿ ವಿಧಾನದಿಂದ ಅಡುಗೆ ನಡೆಯುತ್ತಿದೆ. ಇದೀಗ ಪ್ರತಿ ದಿನ 70 ಸಾವಿರ ಮಕ್ಕಳಿಗೆ ಮಿಡ್‌ಡೇ ಮೀಲ್ಸ್ ನೀಡುವುದರ ಜೊತೆಗೆ ನಗರದ 10 ಕಡೆಗಳಲ್ಲಿ ಅನ್ನದಾನವೂ ನಡೆಯುತ್ತಿದೆ. ಫಾಸಿಲ್ ಫ್ಯೂಯಲ್ ಫ್ರೀ ಅಡುಗೆ ವ್ಯವಸ್ಥೆ ಮೂಲಕ ಅದಮ್ಯ ಚೇತನ ಸಂಸ್ಥೆ ಸದ್ಯದ ಗ್ಯಾಸ್ ಬಿಕ್ಕಟ್ಟಿನ ಸಮಯದಲ್ಲಿ ಎಲ್ಲರಿಗೂ ಮಾದರಿಯಾಗಿದೆ.
ಏನಿದು ಬ್ರಿಕೆಟ್ಸ್?
ಬ್ರಿಕೆಟ್ಸ್ (Briquettes) ಎಂಬುದು ಮರದ ಪುಡಿ, ಕೃಷಿ ತ್ಯಾಜ್ಯ (ನೆಲ್ಲಿಕಾಯಿ ಚಿಪ್ಪು, ಕಡಲೆಕಾಯಿ ಸಿಪ್ಪೆ) ಅಥವಾ ಕಲ್ಲಿದ್ದಲು ಪುಡಿಯಿಂದ ತಯಾರಿಸಿದ ಇಂಧನ ಇಟ್ಟಿಗೆಗಳಾಗಿವೆ. ಇವು ಪರಿಸರ ಸ್ನೇಹಿಯಾಗಿರುವುದರ ಜೊತೆಗೆ ಕಡಿಮೆ ಹೊಗೆ ಮತ್ತು ಹೆಚ್ಚಿನ ಶಾಖವನ್ನು ನೀಡುವ ಪರ್ಯಾಯ ಇಂಧನ ಮೂಲಗಳಾಗಿವೆ. ಇವುಗಳನ್ನು ಉದ್ಯಮಗಳಲ್ಲಿ ಬಾಯ್ಲರ್‌ಗಳಿಗೆ, ಅಡುಗೆಗೆ ಹೆಚ್ಚಾಗಿ ಬಳಸಲಾಗುತ್ತದೆ. ಇದೇ ಕ್ರಮವನ್ನು ದೇಶದ ವಿವಿಧ ಹೋಟೆಲ್‌ಗಳು, ಪಿಜಿಗಳು ಅಳವಡಿಸಿಕೊಂಡರೆ ಸಧ್ಯದ ಪರಿಸ್ಥಿತಿ ಎದುರಿಸಲು ಸಹಾಯವಾಗುತ್ತದೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


