ಬಳೆಗಾರ ಚೆನ್ನಯ್ಯ…
ಬಳೆಗಾರ ಚೆನ್ನಯ್ಯ…
– ಕೆ. ಎಸ್. ನರಸಿಂಹಸ್ವಾಮಿ
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪಣೆಯೆ ದೊರೆಯೆ ?
ನವಿಲೂರ ಮನೆಯಿಂದ ನುಡಿಯೊಂದು ತಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ ||
ಮುಡಿದ ಮಲ್ಲಿಗೆಯರಳು ಬಾಡಿಲ್ಲ ರಾಯರೆ
ತೌರಿನಲಿ ತಾಯಿ ನಗುತಿಹರು
ಕುಡಿದ ನೀರಲುಗಿಲ್ಲ ಕೊರಗದಿರಿ ರಾಯರೆ
ಅಮ್ಮನಿಗೆ ಬಳೆಯ ತೊಡಿಸಿದರು
ಅಂದು ಮಂಗಳವಾರ ನವಿಲೂರ ಕೇರಿಯಲಿ
ಓಲಗದ ಸದ್ದು ತುಂಬಿತ್ತು
ಬಳೆಯ ತೊಡಿಸಿದರಂದು ಅಮ್ಮನಿಗೆ ತೌರಿನಲಿ
ಅಂಗಳದ ತುಂಬ ಜನವಿತ್ತು
ಹಬ್ಬದೂಟವನುಂಡು ಹಸೆಗೆ ಬಂದರು ತಾಯಿ
ಹೊಳೆದಿತ್ತು ಕೊರಳಿನಲಿ ಪದಕ
ಒಬ್ಬರೆ ಹಸೆಗೆ ಬಂದರು ತಾಯಿ ಬಿಂಕದಲಿ
ಕಣ್ತುಂಬ ನೋಡಿದೆನು ಮುದುಕ
ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ
ಸೆರಗಿನಲಿ ಕಣ್ಣೀರನೊರಸಿ
ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ
ದೀಪದಲಿ ಬಿಡುಗಣ್ಣ ನಿಲಿಸಿ
ಬೇಕಾದ ಹಣ್ಣಿಹುದು ಹೂವಿಹುದು ತೌರಿನಲಿ
ಹೊಸ ಸೀರೆ ರತ್ನದಾಭರಣ
ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ
ನಿಮಗಿಲ್ಲ ಒಂದು ಹನಿ ಕರುಣ
ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರೆಳೆದು
ಕುದಿಯಬಾರದು ನನ್ನ ದೊರೆಯೆ
ಹಿಂಡಬಾರದು ದುಂಡು ಮಲ್ಲಿಗೆಯ ದಂಡೆಯನು
ಒಣಗಬಾರದು ಒಡಲ ಚಿಲುಮೆ
ಮುನಿಸು ಮಾವನ ಮೇಲೆ ಮಗಳೇನ ಮಾಡಿದಳು ?
ನಿಮಗೇತಕೆ ಕಲ್ಲು ಮನಸು ?
ಹೋಗಿ ಬನ್ನಿರಿ ಒಮ್ಮೆ ಕೈ ಮುಗಿದು ಬೇಡುವೆನು
ಅಮ್ಮನಿಗೆ ನಿಮ್ಮದೇ ಕನಸು
Read more here
Ello Hudukide Illada Devara Lyrical Video Song in kannada
Krishna nee Begane Baaro song in kannada
Ivale Veena Paani song in kannada
Kannada Gangeyali Meeyuve Naniga Song kannada