ಆಸ್ಪತ್ರೆಗಳಲ್ಲಿ ಔಷಧವಿಲ್ಲ!
- ಮೆಡಿಸಿನ್ ಖರೀದಿಸಲು ಚೀಟಿಯೇ ಮಾಮೂಲಿ | ಸರಕಾರಿ ಆದೇಶ
- ಉಲ್ಲಂಘಿಸುತ್ತಿರುವ ವೈದ್ಯರು | ಉಪಲೋಕಾಯುಕ್ತರ ಆಕ್ರೋಶ
ರಾಜ್ಯದ ಯಾವುದೇ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತ ಔಷಧ ದೊರಕುತ್ತಿಲ್ಲ. ಖಾಸಗಿ ಮೆಡಿಕಲ್ ಸ್ಟೋರ್‌ಗಳಲ್ಲಿ ಔಷಧ ಖರೀದಿಸಲು ಹಾಗೂ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ವೈದ್ಯರು ಚೀಟಿ ಬರೆದುಕೊಡುವುದು ಮಾಮೂಲಿಯಾಗಿದೆ
ಯಾವುದೇ ಕಾರಣಕ್ಕೂ ಸರಕಾರಿ ವೈದ್ಯಾಧಿಕಾರಿಗಳು ಹೊರಗೆ ಔಷಧ ಖರೀದಿಸಲು ಚೀಟಿ ಬರೆದುಕೊಡಬಾರದು, ಜತೆಗೆ ಪರೀಕ್ಷೆಗಳನ್ನೂ ಸಾಧ್ಯವಾದಷ್ಟು ಸರಕಾರಿ ಆಸ್ಪತ್ರೆಗಳಲ್ಲಿಯೇ ಮಾಡಿಸಬೇಕೆಂದು 2017ರಲ್ಲಿಯೇ ಸರಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆದರೆ, ಈ ಆದೇಶವು ಕಾಗದದಲ್ಲಿಯೇ ಉಳಿದಿದೆ. ಬಡ ಹಾಗೂ ಕೆಳ ಮಧ್ಯಮ ವರ್ಗದ ಕುಟುಂಬಗಳು ಜೇಬಲ್ಲಿ ದುಡ್ಡಿಲ್ಲದೆ ಸರಕಾರಿ ಆಸ್ಪತ್ರೆಗಳಿಗೆ ತೆರಳಲಾಗುವುದೇ ಇಲ್ಲ. ಬಡವರಿಗೆ ಉಚಿತ ಔಷಧ ಎಂಬುದು ಗಗನ ಕುಸುಮವಾಗಿದೆ.
ಇಂಥಹ ಘಟನೆಗೆ ಕಳೆದ ವಾರ ಪ್ರತ್ಯಕ್ಷ ಸಾಕ್ಷಿಯಾಗಿರುವವರು ಬೇರಾರೂ ಅಲ್ಲ, ಉಪಲೋಕಾಯುಕ್ತ ಬಿ.ವೀರಪ್ಪ, ತುಮಕೂರಿನ ಜಿಲ್ಲಾಸ್ಪತ್ರೆಗೆ ಇತ್ತೀಚೆಗೆ ದಿಢೀರ್ ಭೇಟಿ ನೀಡಿ ರೋಗಿಗಳ ಅಹವಾಲು ಆಲಿಸಿದರು. ಆಗ ಬಹುತೇಕರು, ”ವೈದ್ಯಾಧಿಕಾರಿಗಳು ಹೊರಗಿನಿಂದ ಔಷಧಗಳನ್ನು ತರಲು ಹಾಗೂ ಖಾಸಗಿ ಪ್ರಯೋಗಾಲಯದಿಂದ ಪರೀಕ್ಷೆಗಳನ್ನು ಮಾಡಿಸಿಕೊಂಡು ಬರಲು ಚೀಟಿ ಬರೆದುಕೊಡುತ್ತಾರೆ’ ಎಂದು ದೂರಿದರು.
ಆಗ ಉಪ ಲೋಕಾಯುಕ್ತರು ಜಿಲ್ಲಾ ವೈದ್ಯಾಧಿಕಾರಿಗಳನ್ನು ಕರೆದು, ಈ ಕುರಿತು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. “ಯಾರು ಚೀಟಿ ಬರೆದುಕೊಟ್ಟಿದ್ದಾರೋ ಅವರ ವಿರುದ್ಧನೀವು ಕ್ರಮ ಕೈಗೊಳ್ಳುತ್ತೀರೋ, ಇಲ್ಲ ನಾವೇ ಸರಕಾರಕ್ಕೆ ಕ್ರಮ ಕೈಗೊಳ್ಳಲು ಆದೇಶ ನೀಡಬೇಕೋ” ಎಂದು ಬೆವರಿಳಿಸಿದರು